October 7, 2026
IMG-20260903-WA0013

ವ
*ಕನಕಗಿರಿ, ಸೆ.03:* ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳ ಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ (ಕರ್ನಾಟಕ) ಜಿಲ್ಲಾ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಪ್ರೇರಣಾ ಶಿಬಿರ ಆಯೋಜಿಸಲಾಗಿದ್ದು, ಬುಧವಾರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೈಡ್ಸ್ ಕೊ‌ಪ್ಪಳ ಜಿಲ್ಲಾ ಸಂಸ್ಥೆಯ ಆಯುಕ್ತರಾದ ಅರುಣಕುಮಾರಿ ವಸ್ತ್ರದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ನೆರವಾಗುವ ಅತ್ಯಂತ ಪ್ರಭಾವಶಾಲಿ ಯುವ ಚಳವಳಿಯಾಗಿದೆ. ಶಾಲೆ ಮತ್ತು ಕಾಲೇಜು ಹಂತದಲ್ಲಿಯೇ ಮಕ್ಕಳಲ್ಲಿ ಶಿಸ್ತು, ದೇಶಭಕ್ತಿ, ನಾಯಕತ್ವದ ಗುಣಗಳು ಮತ್ತು ಸಾಮಾಜಿಕ ಕಳಕಳಿಯನ್ನು ಬೆಳೆಸುವಲ್ಲಿ ಇದರ ಪಾತ್ರ ಅಪಾರವಾಗಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, ​ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಣವು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೆ, ಜೀವನ ಮೌಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸುತ್ತದೆ. ಶಿಬಿರಗಳು, ಪಾದಯಾತ್ರೆಗಳು ಮತ್ತು ವಿವಿಧ ಸಾಹಸಮಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ ಮತ್ತು ಧೈರ್ಯ ಹೆಚ್ಚುತ್ತದೆ. ನಿಸರ್ಗದೊಂದಿಗೆ ಬೆರೆಯುವ ಅವಕಾಶ ಸಿಗುವುದರಿಂದ ಪರಿಸರ ಪ್ರೇಮ ಮತ್ತು ಪರಿಸರ ಸಂರಕ್ಷಣೆಯ ಅರಿವು ಮೂಡುತ್ತದೆ. ಜೊತೆಗೆ ವ್ಯಕ್ತಿ, ವ್ಯವಸ್ಥೆ ಹಾಗೂ ಸಮಾಜದೊಂದಿಗೆ ಬೆರೆಯುವ ಅಮೂಲ್ಯವಾದ ಗುಣವನ್ನು ಕಲಿಸುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಸ್ಕೌಟ್ ಮತ್ತು ಗೈಡ್ಸ್ ತರಬೇತಿಗೆ ಕಳಿಸುವತ್ತ ಹೆಚ್ಚಿನ ಆಸಕ್ತಿ ತೋರಬೇಕು. ಇದರಿಂದ ತಮ್ಮ ಮಕ್ಕಳಿಗೆ ಭವಿಷ್ಯದ ಉನ್ನತ ಶಿಕ್ಷಣ ಸೇರಿದಂತೆ ಉದ್ಯೋಗದಲ್ಲಿಯೂ ವಿಶೇಷ ಮೀಸಲಾತಿ ಸೌಲಭ್ಯ ಕೂಡ ಸಿಗುತ್ತದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಜಿಲ್ಲಾ ಸಂಘಟಕರಾದ ಮಲ್ಲೇಶಪ್ಪ.ಟಿ ಅವರು ಮಾತನಾಡಿ, ಸಾಮಾಜಿಕ ಸೇವೆಯು ಈ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಪ್ರಕೃತಿ ವಿಕೋಪಗಳು, ಜಾತ್ರೆಗಳು ಅಥವಾ ಸಾರ್ವಜನಿಕ ಸಮಾರಂಭಗಳ ಸಮಯದಲ್ಲಿ ಈ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸುತ್ತಾರೆ. “ಸದಾ ಸಿದ್ಧರಾಗಿರಿ” ಎಂಬ ಇವರ ಧ್ಯೇಯವಾಕ್ಯವು ಯಾವುದೇ ಕಠಿಣ ಪರಿಸ್ಥಿತಿಯನ್ನೂ ಎದುರಿಸುವ ಮಾನಸಿಕ ಹಾಗೂ ಶಾರೀರಿಕ ಸಾಮರ್ಥ್ಯವನ್ನು ನೀಡುತ್ತದೆ. ಜೊತೆಗೆ ಪ್ರಥಮ ಚಿಕಿತ್ಸೆ ಹಾಗೂ ಸ್ವಯಂ ರಕ್ಷಣೆಯಂತಹ ಅನೇಕ ಉಪಯುಕ್ತ ಕೌಶಲಗಳನ್ನು ಇಲ್ಲಿ ಕಲಿಯಬಹುದು ಎಂದು ತಿಳಿಸಿದರು.

ಸಂಸ್ಥೆಯ ತಾಲೂಕು ಸಂಘಟಕರಾದ ಹುಸೇನ್ ಸಾಬ್ ಮಕಾಂದಾರ್ ಅವರು ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಯುವಜನತೆ ದಾರಿ ತಪ್ಪದಂತೆ ತಡೆದು, ಅವರಲ್ಲಿ ಸಹೋದರತ್ವ, ಕೋಮು ಸೌಹಾರ್ದತೆ ಮತ್ತು ಜವಾಬ್ದಾರಿಯುತ ಪೌರತ್ವವನ್ನು ಬೆಳೆಸಲು ಸ್ಕೌಟ್ ಮತ್ತು ಗೈಡ್ಸ್ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಆಂದೋಲನದಲ್ಲಿ ಭಾಗವಹಿಸುವುದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣಗೊಂಡು, ದೇಶಕ್ಕೆ ಶ್ರೇಷ್ಠ ಪ್ರಜೆಗಳು ಲಭ್ಯವಾಗುತ್ತಾರೆ ಎಂದು ತಿಳಿಸಿದರು.

ದೀಪ ಬೆಳಗಿಸಿ, ಲಾರ್ಡ್ ಬೇಡನ್ ಪೊವೆಲ್ ಮತ್ತು ಆಗ್ನೆಸ್ ಬೇಡನ್ ಪೊವೆಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು‌ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ರಕ್ಷಿತ್.ಎ ಅವರು ಮಾತನಾಡಿ, ಶಿಬಿರದ ಯಶಸ್ಸಿಗೆ ಶುಭ ಕೋರಿದರುವುದರೊಂದಿಗೆ ಶಿಬಿರಾರ್ಥಿಗಳೆಲ್ಲಾ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಕ್ಷೇಮಾಭಿವೇದ್ಧಿ ಸಂಘದ ಅಧ್ಯಕ್ಷರಾದ ಸೋಮಶೇಖರಪ್ಪ‌ ಕಂಚಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಮೊದಲ ದಿನದ ಶಿಬಿರದಲ್ಲಿ ಸಂಪನ್ಮೂಲ‌ ವ್ಯಕ್ತಿಗಳಾಗಿ ಶಾಹೀನ್ ಕೌಸರ್, ಹನುಮೇಶ್ ಕಾರಟಗಿ, ಡಾ. ಸುಲೋಚನಾ ಚಿನಿವಾಲರ, ಡಾ. ಅನಿತಾ ಶಶಿಧರ್, ಡಾ. ಸುಲೋಚನಾ ವೆಂಕಟೇಶ್, ರಮ್ಯಾ ಕಾರಟಗಿ ಹಾಗೂ ಶ್ರೀದೇವಿ ಅನ್ನುವವರು ಭಾಗವಹಿಸಿದ್ದರು. ಕಾಲೇಜಿನ ರೋವರ್ಸ್ ಘಟಕದ ಸಂಯೋಜಕರು ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರೂ ಆದ ಸಂಗಮೇಶ್ ಸ್ವಾಗತಿಸಿದರು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಫೀಸಾ ಬಾನು ವಂದಿಸಿದರು ಮತ್ತು ರೇಂಜರ್ಸ್ ಘಟಕದ ಸಂಯೋಜಕರು ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರೂ ಆದ ಸರ್ವಮಂಗಳಮ್ಮ.ಟಿ.ಆರ್ ನಿರೂಪಿಸಿದರು. ವಿವಿಧ ವಿಭಾಗಗಳ ಅಧ್ಯಾಪಕರುಗಳಾದ ವಿಜಯ್ ಸರೋದೆ, ಮಾರುತಿ, ಶಂಬುಲಿಂಗಯ್ಯ ಸ್ವಾಮಿ, ಆನಂದ್ ಕಂಚಿ‌ ಸೇರಿದಂತೆ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭಕ್ಕೂ ಮುಂಚೆ ಶ್ಕೌಟ್ ಮತ್ತು ಗೈಡ್ಸ್ ಧ್ವಜಾರೋಹಣ ನೆರವೇರಿಸಲಾಯಿತು.

Leave a Reply

Your email address will not be published. Required fields are marked *