October 7, 2026
IMG-20261006-WA0009

ವರದಿ:ಚನ್ನಬಸಪ್ಪ ಯಲಘಟ್ಟ. ಹಟ್ಟಿ ಚಿನ್ನದಗಣಿ,ಅ.6
​”ಇತರ ಪ್ರಾಣಿಗಳಿಗೆ ಕೇವಲ ಹೊಟ್ಟೆಯ ಹಸಿವು ಮಾತ್ರವಿರುತ್ತದೆ. ಆದರೆ ಮನುಷ್ಯನಿಗೆ ಹೊಟ್ಟೆಯ ಹಸಿವಿನ ಜೊತೆಗೆ ಆತ್ಮದ ಹಸಿವು ಹಾಗೂ ನೆತ್ತಿಯ ಜ್ಞಾನದ ಹಸಿವು ಎಂಬ ಮೂರು ಹಸಿವುಗಳಿರುತ್ತವೆ. ಈ ಆತ್ಮ ಮತ್ತು ಜ್ಞಾನದ ಹಸಿವನ್ನು ತೀರಿಸುವ ಶಕ್ತಿ ನೈಜ ಸಾಹಿತ್ಯಕ್ಕಿದೆ” ಎಂದು ಮಾನವಿಯ ಹಿರಿಯ ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.
​ಸ್ಥಳೀಯ ಶ್ರೀ ವಿನಾಯಕ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕವಿ ಡಾ. ಮಹೇಂದ್ರ ಕುರ್ಡಿ ಅವರ ‘ಹೊನ್ನುಡಿ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
​ನಡೆ, ನುಡಿ ಮತ್ತು ನೋಟ ಹಸನಾಗಿರಲಿ:
ಇದೇ ವೇಳೆ ಸಾಹಿತ್ಯದ ಮಹತ್ವವನ್ನು ತಿಳಿಸಿದ ಅವರು, “ನೋಟದಲ್ಲಿ ವ್ಯತ್ಯಾಸವಾದರೆ ಮನಸ್ಸು ಕೆಡುತ್ತದೆ, ಮಾತಿನಲ್ಲಿ ವ್ಯತ್ಯಾಸವಾದರೆ ಸಂಬಂಧ ಕೆಡುತ್ತದೆ, ಹಾಗೂ ನಡತೆಯಲ್ಲಿ ವ್ಯತ್ಯಾಸವಾದರೆ ಇಡೀ ಪೀಳಿಗೆಯೇ ಕೆಡುತ್ತದೆ. ಆದ್ದರಿಂದ ಪ್ರತಿಯೊಬ್ಬರ ನಡೆ, ನುಡಿ ಮತ್ತು ನೋಟ ಯಾವಾಗಲೂ ಹಸನಾಗಿರಬೇಕು” ಎಂದು ಕರೆ ನೀಡಿದರು.
​”ಈ ಮೌಲ್ಯಯುತ ಕೃತಿಯು ಜಾತಿ-ಮತಗಳ ಗಡಿಯನ್ನು ಮೀರಿ, ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ಸಾಗುವ ಸಹೃದಯಿ ಓದುಗರಿಗೆ ಅರ್ಪಿತವಾಗಿದೆ. ಜೀವನದ ಸವಾಲುಗಳನ್ನು ಧೈರ್ಯವಾಗಿ ಎದುರಿಸುವುದು, ಆತ್ಮಹತ್ಯೆಯಂತಹ ದುಷ್ಪ್ರವೃತ್ತಿ ತಡೆಯುವುದು, ಪರಿಸರ ಸಂರಕ್ಷಣೆ ಮಾಡುವುದು ಹಾಗೂ ವಿಶ್ವಮಾನವ ತತ್ವವನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ” ಎಂದರು.
​ಸಮಾಜಕ್ಕೆ ಸುಚಿ-ರುಚಿಯಾದ ಸಾಹಿತ್ಯದ ಅಗತ್ಯ:
ತಮ್ಮ ಭಾಷಣದುದ್ದಕ್ಕೂ ಜಾನಪದ ಹಾಡುಗಳು, ಬಸವಣ್ಣನವರ ವಚನಗಳು, ಮದಾರ ಚೆನ್ನಯ್ಯ ಹಾಗೂ ವಿಜಿಲಿ ಅವರ ತತ್ವಪದಗಳನ್ನು ಉಲ್ಲೇಖಿಸಿದ ಅವರು, “ಸಮಾಜಕ್ಕೆ ಸದಾ ಸುಚಿ ಹಾಗೂ ರುಚಿಯಾದ ಸಾಹಿತ್ಯದ ಅಗತ್ಯವಿದೆ. ಮನುಷ್ಯನು ತನ್ನ ಆಚಾರ, ವಿಚಾರ ಮತ್ತು ನಡವಳಿಕೆಯಲ್ಲಿ ಸುಧಾರಣೆ ತಂದುಕೊಂಡು, ಪರನಿಂದನೆ ಬಿಟ್ಟು ಪ್ರೀತಿಯಿಂದ ಬಾಳಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
*​ಗಣ್ಯರ ಉಪಸ್ಥಿತಿ:*
ಈ ಕೃತಿಗೆ ಪ್ರಗತಿಪರ ಚಿಂತಕ ಹಾಗೂ ವಿಮರ್ಶಕರಾದ ರಂಜಾನ್ ದರ್ಗಾ ಅವರು ಮೌಲಿಕ ಮುನ್ನುಡಿ ಬರೆದಿದ್ದು, ರಾಯಚೂರು ಕಸಾಪ ಮಾಜಿ ಅಧ್ಯಕ್ಷರಾದ ಪಂಪಾಪತಿ ಅವರು ಬೆನ್ನುಡಿ ಬರೆದಿದ್ದಾರೆ.
​ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿ. ಬಿ. ಚೀಲ್ಕರಾಗಿ, ಡಿವೈಎಸ್ಪಿ ರವಿ ಪುರುಷೋತ್ತಮ, ಎಂ. ಎಲ್. ಪಾಟೀಲ್, ಹಾಗೂ ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ನರಸಪ್ಪ ಯಾದವ ಅವರು ಶುಭ ಹಾರೈಸಿದರು ಮಾತನಾಡಿದರು.
​ಈ ಸಂದರ್ಭದಲ್ಲಿ ಮಾಣಿಕ್ಯ ಚಿಲೂರು, ಗಾಯತ್ರಿ ಯಲ್ಲಪ್ಪಗೌಡ, ರಾಮಾಂಜನೇಯಪ್ಪ, ಸೈಯದ್ ಶಂಶುದ್ದೀನ್, ಡಾ. ಮಹಾದೇವಪ್ಪ ನಾಗರಾಳ, ಡಾ. ಕೆ. ಶಶಿಕಾಂತ ಲಿಂಗಸುಗೂರು, ಶರಣಬಸವ ಕೆ. ಗುಡದಿನ್ನಿ, ಮಂಜುನಾಥ, ಖಾಜಾವಲಿ ಈಚನಾಳ, ರಾಜನಗೌಡ, ಅನಿಲಕುಮಾರ ಮಿಶ್ರಾ, ಡಾ. ಹುಲಗಪ್ಪ ಬುದ್ದಿನಿ, ಶರಣಬಸವ ಪೂಜಾರಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *