October 7, 2026
IMG-20261005-WA0044

ಕನಕಗಿರಿ,ಅ.05-
ಮಳೆ ಕೊರತೆಯಿಂದ ತಾಲೂಕಿನಲ್ಲಿ ಉಂಟಾಗಿರುವ ಖಾರಿಫ್ ಬರ ಪರಿಸ್ಥಿತಿಯ ನೈಜ ಸ್ಥಿತಿಗತಿಗಳನ್ನು ಅರಿಯಲು ಕೇಂದ್ರ ಬರ ಅಧ್ಯಯನ ತಂಡವು ಸೋಮವಾರ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿತು.

ಕೇಂದ್ರ ಸರ್ಕಾರದ ನಿರ್ದೇಶಕ ಡಾ. ಮನ್ ಸಿಂಗ್ ನೇತೃತ್ವದ ತಂಡವು ಕನಕಗಿರಿ ಹೋಬಳಿಯ ತಿಪ್ಪನಾಳ ಗ್ರಾಮಕ್ಕೆ ಭೇಟಿ ನೀಡಿ ರೈತ ಯಮನೂರಪ್ಪ ಅವರ ಜಮೀನಿನಲ್ಲಿ ಮಳೆ ಕೊರತೆಯಿಂದ ಒಣಗುತ್ತಿರುವ ತೊಗರಿ ಬೆಳೆಯನ್ನು ವೀಕ್ಷಿಸಿತು. ಬಳಿಕ ಸುಳೇಕಲ್ ಗ್ರಾಮಕ್ಕೆ ತೆರಳಿ ರೈತರ ಕೃಷಿ ಜಮೀನು ಹಾಗೂ ಕೃಷಿ ಹೊಂಡಗಳನ್ನು ಪರಿಶೀಲಿಸಿತು.

ಸುಳೇಕಲ್ ಗ್ರಾಮದ ರೈತ ಸಂಗಪ್ಪ ತಂದೆ ನೂತನ ಶೆಟ್ಟಿ ಅವರ ಜಮೀನಿನಲ್ಲಿ ಮಳೆ ಕೊರತೆಯಿಂದ ಹಾನಿಗೊಳಗಾದ ಸೂರ್ಯಕಾಂತಿ ಬೆಳೆಯನ್ನು ಹಾಗೂ ರೈತ ಸಣ್ಣ ಕಾಶಿಂಸಾಬ ತಂದೆ ಮರ್ದಾನಸಾಬ ಅವರ ಜಮೀನಿನಲ್ಲಿ ನಷ್ಟವಾಗಿರುವ ಮೆಕ್ಕೆಜೋಳ ಸೇರಿದಂತೆ ಅಕ್ಕಪಕ್ಕದ ಬೆಳೆಗಳ ಸ್ಥಿತಿಯನ್ನು ತಂಡ ಪರಿಶೀಲಿಸಿತು.

ಈ ಸಂದರ್ಭದಲ್ಲಿ ರೈತರಿಂದ ಮಳೆ ಕೊರತೆ, ಬೆಳೆ ನಷ್ಟ, ಕೃಷಿಗೆ ಮಾಡಿರುವ ಖರ್ಚು, ನೀರಿನ ಸಮಸ್ಯೆ ಹಾಗೂ ಇಳುವರಿ ಕುಸಿತದ ಕುರಿತು ಕೇಂದ್ರ ತಂಡದ ಅಧಿಕಾರಿಗಳು ಮಾಹಿತಿ ಪಡೆದರು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು, ಕೃಷಿ ಸಾಲ ಮನ್ನಾ ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಮನವಿ ಮಾಡಿದರು.

ತಾಲೂಕಿನ ಬರ ಪರಿಸ್ಥಿತಿ, ಬೆಳೆ ಹಾನಿ ಹಾಗೂ ರೈತರ ಸಮಸ್ಯೆಗಳ ಕುರಿತು ಅಧಿಕಾರಿಗಳು ಕೇಂದ್ರ ತಂಡಕ್ಕೆ ವಾಸ್ತವಾಂಶಗಳನ್ನು ವಿವರಿಸಿದರು. ರೈತರ ಅಹವಾಲುಗಳನ್ನು ಆಲಿಸಿದ ತಂಡವು ಪರಿಶೀಲನೆಯ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಗಂಗಾವತಿ ಡಿವೈಎಸ್ಪಿ ಜೆ ಎಸ್ ನ್ಯಾಮನಗೌಡ, ಕೃಷಿ ಇಲಾಖೆ ಅಧಿಕಾರಿ ನವೀನ್, ತಹಶೀಲ್ದಾರ ಚಂದ್ರಶೇಖರ್ ಗಾಳಿ, ತಾಲೂಕು ಪಂಚಾಯತಿ ಅಧಿಕಾರಿ, ಕೆ ರಾಜಶೇಖರ್,ಪಿಐ ವೀರಣ್ಣ ಹಳ್ಳಿ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *