October 7, 2026
IMG-20260915-WA0054

ಗಂಗಾವತಿ, ಸೆ.15: ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿ ಹಾಗೂ ಇಂಜಿನಿಯರ್ಸ್ ಡೇ ಅಂಗವಾಗಿ ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಸಾತ್ವಿಕ್ ಜಿ. ಅವರು ಅಭಿವೃದ್ಧಿಪಡಿಸಿದ ‘ಮಹಾನ್ ಕಿಡ್ಸ್ ವಾಟ್ಸಪ್ ಎಐ ಅಸಿಸ್ಟೆಂಟ್’ ಅನ್ನು ಪಾಲಕರಿಗೆ ಪರಿಚಯಿಸಿ ಬಿಡುಗಡೆ ಮಾಡಲಾಯಿತು.
ತಂತ್ರಜ್ಞಾನವನ್ನು ಶಿಕ್ಷಣದೊಂದಿಗೆ ಜೋಡಿಸುವ ನಿಟ್ಟಿನಲ್ಲಿ ರೂಪಿಸಿರುವ ಈ ಎಐ ಅಸಿಸ್ಟೆಂಟ್ ಮೂಲಕ ಪಾಲಕರು ತಮ್ಮ ಮೊಬೈಲ್‌ನಲ್ಲಿಯೇ ಮಕ್ಕಳಿಗೆ ಸಂಬಂಧಿಸಿದ ವಿವಿಧ ಮಾಹಿತಿಯನ್ನು ವಾಟ್ಸಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.
ಮಕ್ಕಳ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಪ್ರಗತಿ, ಪರೀಕ್ಷೆ ಹಾಗೂ ಅಂಕಗಳ ವಿವರ, ಕಲಿಕಾ ಚಟುವಟಿಕೆಗಳು ಮತ್ತು ಶಾಲೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಮಾಹಿತಿಯನ್ನು ಸುಲಭವಾಗಿ ಪಡೆಯುವ ವ್ಯವಸ್ಥೆಯನ್ನು ಇದರಲ್ಲಿ ಕಲ್ಪಿಸಲಾಗಿದೆ. ಕಾರ್ಯಕ್ರಮದ ವೇಳೆ ಪಾಲಕರು ಎಐ ಅಸಿಸ್ಟೆಂಟ್ ಬಳಸಿ ಮಕ್ಕಳ ಮಾಹಿತಿಯನ್ನು ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಕೈಚಳಕದಲ್ಲಿ ಇಂಜಿನಿಯರಿಂಗ್ ಮಾದರಿಗಳು
ಇಂಜಿನಿಯರ್ಸ್ ಡೇ ಅಂಗವಾಗಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿನೂತನ ಇಂಜಿನಿಯರಿಂಗ್ ಮಾದರಿಗಳು ಗಮನ ಸೆಳೆದವು. ಟೆನ್ಸ್‌ಗ್ರಿಟಿ ಫ್ಲೈಯಿಂಗ್ ಟೇಬಲ್, ವಿಮಾನಗಳು, ಡ್ರೋನ್‌ಗಳು, ಮಳೆನೀರು ಕೊಯ್ಲು ವ್ಯವಸ್ಥೆ, ಸೇತುವೆ ಹಾಗೂ ಕಟ್ಟಡಗಳ ಮಾದರಿ ಸೇರಿದಂತೆ ಹಲವು ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶಿಸಿದರು.
ವಿದ್ಯಾರ್ಥಿಗಳ ಸೃಜನಶೀಲತೆ, ವೈಜ್ಞಾನಿಕ ಕುತೂಹಲ ಹಾಗೂ ತಾಂತ್ರಿಕ ಚಿಂತನೆಗೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಹಳೆಯ ವಿದ್ಯಾರ್ಥಿಯ ಕೊಡುಗೆ ಹೆಮ್ಮೆಯ ಸಂಗತಿ’
ಶಾಲೆಯ ಅಧ್ಯಕ್ಷ ನೇತ್ರಾಜ್ ಗುರುವಿನಮಠ ಮಾತನಾಡಿ, “ವಿದ್ಯಾರ್ಥಿಗಳಾಗಿದ್ದಾಗ ಮಕ್ಕಳು ವಿವಿಧ ಇಂಜಿನಿಯರಿಂಗ್ ಮಾದರಿಗಳನ್ನು ತಯಾರಿಸುತ್ತಿದ್ದರು. ಇಂದು ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಸಾತ್ವಿಕ್ ಅವರು ಮಹಾನ್ ಕಿಡ್ಸ್ ವಾಟ್ಸಪ್ ಎಐ ಅಸಿಸ್ಟೆಂಟ್ ರೂಪಿಸಿ ಶಾಲೆಗೆ ಕೊಡುಗೆಯಾಗಿ ನೀಡಿರುವುದು ಸಂತಸ ತಂದಿದೆ. ಚಿಕ್ಕದಾದ ಪ್ರಯತ್ನವೊಂದು ಇಂದು ಪಾಲಕರ ಕೈಯಲ್ಲಿರುವ ಉಪಯುಕ್ತ ತಂತ್ರಜ್ಞಾನವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ” ಎಂದು ಹರ್ಷ ವ್ಯಕ್ತಪಡಿಸಿದರು.
ಮುಖ್ಯೋಪಾಧ್ಯಾಯಿನಿ ಸವಿತಾ ಗುರುವಿನಮಠ ಮಾತನಾಡಿ, “ನಾವು ನಡೆಯುವ ರಸ್ತೆಗಳು, ವಾಸಿಸುವ ಕಟ್ಟಡಗಳು ಹಾಗೂ ಬಳಸುತ್ತಿರುವ ವಿವಿಧ ತಂತ್ರಜ್ಞಾನಗಳ ಹಿಂದೆ ಇಂಜಿನಿಯರ್‌ಗಳ ಅಪಾರ ಕೊಡುಗೆ ಇದೆ. ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲ ಇಂಜಿನಿಯರ್‌ಗಳಿಗೆ ಇಂಜಿನಿಯರ್ಸ್ ಡೇಯ ಶುಭಾಶಯಗಳು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪೂರ್ಣಿಮಾ, ಕುಮುದಿನಿ, ಚಂಪರಾಣಿ, ಶಾಂತಿ, ಸಹನಾ, ದೀಪ, ಸೌಮ್ಯ, ಗೌರಿ, ಶ್ರೀದೇವಿ, ರೇಷ್ಮಾ, ಸುಮಂಗಲ, ಜ್ಯೋತಿ, ಅಶ್ವಿನಿ, ಸಿದ್ದೇಶ್, ಪಂಪಾಪತಿ ಹಾಗೂ ಈರಯ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *