October 7, 2026
IMG-20260902-WA0075

ವರದಿ: ಶರಣು ಮರಾಠಿ.
*ಕನಕಗಿರಿ, ಸೆ.2:* ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಅವ್ಯವಹಾರಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಅನ್ಯಾಯಕ್ಕೊಳಗಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಆಗ್ರಹಿಸಿವೆ.

SFI ಹಾಗೂ DYFI ಕೊಪ್ಪಳ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಬುಧವಾರ ಕನಕಗಿರಿ ತಹಸೀಲ್ದಾರ್ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, KPSC ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ವರ್ಷಗಳ ಕಾಲ ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಯಾವುದೇ ಕಾರಣಕ್ಕೂ ಚೆಲ್ಲಾಟವಾಡಬಾರದು. ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳ ಆರೋಪಗಳು ಕೇಳಿಬಂದಿರುವುದು ಅಭ್ಯರ್ಥಿಗಳಲ್ಲಿ ಸರ್ಕಾರ ಹಾಗೂ ನೇಮಕಾತಿ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ಉಂಟುಮಾಡಿದೆ ಎಂದು ಹೇಳಿದರು.

ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿರುವುದು ಹಾಗೂ ಐಷಾರಾಮಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಪರೀಕ್ಷೆ ನಡೆಸಿರುವ ಆರೋಪಗಳ ಕುರಿತು ತನಿಖೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 15 ಸಾವಿರ ಶಿಕ್ಷಕರ ಹುದ್ದೆಗಳು, ಕ್ರೈಸ್ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಗೆ ಪರೀಕ್ಷೆಗಳು ನಡೆಯಲಿವೆ. ಈ ಎಲ್ಲ ಪರೀಕ್ಷೆಗಳನ್ನು ಸಂಪೂರ್ಣ ಪಾರದರ್ಶಕತೆ ಹಾಗೂ ಕಟ್ಟುನಿಟ್ಟಿನ ಭದ್ರತೆಯೊಂದಿಗೆ ನಡೆಸಬೇಕು ಎಂದು ಆಗ್ರಹಿಸಿದರು.

“ಹಣ ಇರುವವರು ಪರೀಕ್ಷೆಗೆ ಕುಳಿತುಕೊಳ್ಳದೇ ಹಣ ಕೊಟ್ಟು ಹುದ್ದೆ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾದರೆ, ಅರ್ಹ ಅಭ್ಯರ್ಥಿಗಳ ಗತಿಯೇನು? ನಾಳೆ ಯಾರಾದರೂ ₹5 ಕೋಟಿ ಹಣ ನೀಡುತ್ತೇನೆ, ತಹಸೀಲ್ದಾರ್ ಅಥವಾ ಎಸಿ ಹುದ್ದೆ ಬೇಕು ಎಂದು ಬಂದರೆ ಹುದ್ದೆಗಳನ್ನು ಹಣಕ್ಕಾಗಿ ಮಾರಾಟ ಮಾಡಲು ಸಾಧ್ಯವೇ? ಇಂತಹ ವ್ಯವಸ್ಥೆಗೆ ಸರ್ಕಾರ ಕಡಿವಾಣ ಹಾಕಬೇಕು” ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

KPSC ನೇಮಕಾತಿ ಅಕ್ರಮಗಳ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಅಕ್ರಮದ ಆರೋಪ ಎದುರಾಗಿರುವ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಹಾಗೂ ಅನ್ಯಾಯಕ್ಕೊಳಗಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಲ್ಲದೆ, ಮುಂದಿನ ದಿನಗಳಲ್ಲಿ ನಡೆಯುವ KPSC ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಗಳಲ್ಲಿ ಸಂಪೂರ್ಣ ಪಾರದರ್ಶಕತೆ ಹಾಗೂ ಭದ್ರತೆ ಖಚಿತಪಡಿಸಬೇಕು. ಪರೀಕ್ಷಾ ಅಕ್ರಮಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಲು ಪರಿಣಾಮಕಾರಿ ವ್ಯವಸ್ಥೆ ರೂಪಿಸಿ, ರಾಜ್ಯದ ನಿರುದ್ಯೋಗಿ ಯುವಜನರ ಭವಿಷ್ಯವನ್ನು ರಕ್ಷಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ DYFI ರಾಜ್ಯ ಸಮಿತಿ ಸದಸ್ಯ ಅಮರೇಶ ಕಡಗದ, SFI ಜಿಲ್ಲಾ ಅಧ್ಯಕ್ಷ ಶಿವಕುಮಾರ ಈಚನಾಳ, ಕನಕಗಿರಿ ತಾಲೂಕು ಅಧ್ಯಕ್ಷ ಹನುಮೇಶ ಮ್ಯಾಗಡೆ ಸೇರಿದಂತೆ ವಿದ್ಯಾರ್ಥಿಗಳಾದ ಯಂಕೋಬ, ರಾಹುಲ್, ಹನುಮೇಶ, ಶಿವು, ಶರಣಬಸವ, ಕಾರ್ತಿಕ್, ಶಿವಮ್ಮ, ರತ್ನ, ಶ್ರೀದೇವಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *