*
*ಕನಕಗಿರಿ–ಕೊಪ್ಪಳ ಬಸ್ ಸೇವೆಯಲ್ಲಿ ಸಮಯ ಪಾಲನೆಗೆ ಪ್ರಯಾಣಿಕರ ಆಗ್ರಹ.*
*ಕನಕಗಿರಿ :ಸೆ 15* ತಾಲೂಕು ಕೇಂದ್ರದಿಂದ ಕೊಪ್ಪಳಕ್ಕೆ ಪ್ರತಿದಿನ ಬೆಳಿಗ್ಗೆ 5:30ಕ್ಕೆ ತೆರಳಬೇಕಿದ್ದ KA-37 F-0577 ಸಂಖ್ಯೆಯ ಬಸ್ ಅನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬೆಳಿಗ್ಗೆ 5:15ಕ್ಕೆ ಬಿಡಲಾಗುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಸ್ ಬೆಳಿಗ್ಗೆ 5:30ಕ್ಕೆ ಕನಕಗಿರಿಯಿಂದ ಹೊರಡುತ್ತದೆ ಎಂಬುದನ್ನು ನಂಬಿಕೊಂಡು ಜಿಲ್ಲಾ ಆಸ್ಪತ್ರೆಗೆ ತೆರಳುವ ರೋಗಿಗಳು ಹಾಗೂ ಅವರ ಸಂಬಂಧಿಕರು, ಕೊಪ್ಪಳದಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು, ಕೊಪ್ಪಳದಿಂದ ಬೇರೆಡೆಗೆ ಪ್ರಯಾಣ ಬೆಳೆಸುವವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಬಸ್ ನಿಲ್ದಾಣಕ್ಕೆ ನಿಗದಿತ ಸಮಯಕ್ಕೆ ಆಗಮಿಸುತ್ತಾರೆ. ಆದರೆ ಬಸ್ ಅನ್ನು 15 ನಿಮಿಷ ಮುಂಚಿತವಾಗಿಯೇ ಬಿಡುತ್ತಿರುವುದರಿಂದ ಹಲವರು ಬಸ್ ತಪ್ಪಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕು ಕೇಂದ್ರವಾಗಿರುವ ಕನಕಗಿರಿ ಬಸ್ ನಿಲ್ದಾಣದಲ್ಲಿ ಕಂಟ್ರೋಲರ್ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದೇ ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಸಿಫ್ಟಿಂಗ್ ಕಂಟ್ರೋಲರ್ ಅವಶ್ಯಕತೆ ಇದ್ದು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ರಾತ್ರಿ ವಸತಿ ಇರುವ ಬಸ್‌ಗಳು ಹಾಗೂ ಬೆಳಗಿನ ಜಾವ ಸಂಚಾರ ಆರಂಭಿಸುವ ಬಸ್‌ಗಳ ಸಮಯದ ಬಗ್ಗೆ ಚಾಲಕರು ಮತ್ತು ನಿರ್ವಾಹಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಹಾಗೂ ಸಮಯ ಪಾಲನೆಯನ್ನು ಪರಿಶೀಲಿಸುವ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.
ನಿಗದಿತ ವೇಳಾಪಟ್ಟಿಯಂತೆ ಬಸ್ ಸಂಚಾರ ನಡೆಸುವುದು ಸಾರಿಗೆ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ. ವಿಶೇಷವಾಗಿ ಮುಂಜಾನೆ ಸಂಚರಿಸುವ ಬಸ್‌ಗಳ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆಸ್ಪತ್ರೆ, ಉದ್ಯೋಗ, ಶಾಲೆ-ಕಾಲೇಜು ಹಾಗೂ ಮುಂದಿನ ಪ್ರಯಾಣಕ್ಕೆ ತೆರಳುವ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಹೀಗಾಗಿ ಬಸ್‌ಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ನಿಲ್ದಾಣದಿಂದ ಹೊರಡಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಮಯ ಪ್ರಜ್ಞೆ ಇಲ್ಲದೆ ನಿಗದಿತ ವೇಳಾಪಟ್ಟಿಯನ್ನು ಉಲ್ಲಂಘಿಸಿ ಬಸ್ ಚಲಾಯಿಸುತ್ತಿರುವ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಸಾರಿಗೆ ಇಲಾಖೆಯ ಕೊಪ್ಪಳ ವಿಭಾಗದ ಸಂಬಂಧಪಟ್ಟ ನಿಯಂತ್ರಣಾಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಅಲ್ಲದೆ, ಕನಕಗಿರಿ ತಾಲೂಕು ಕೇಂದ್ರದ ಬಸ್ ನಿಲ್ದಾಣದಲ್ಲಿ ಕಂಟ್ರೋಲರ್‌ನ್ನು ನೇಮಿಸಿ, ಪ್ರತಿಯೊಂದು ಬಸ್‌ನ ಆಗಮನ-ನಿರ್ಗಮನ ಸಮಯವನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ವೇಳಾಪಟ್ಟಿಯಂತೆ ಬಸ್‌ಗಳು ಸಂಚರಿಸುವಂತೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
