October 7, 2026
IMG-20260902-WA0073

ಕನಕಗಿರಿ, ಸೆ.2: ತಾಲೂಕಿನ ಕರಡಿಗುಡ್ಡ ಸೇರಿದಂತೆ ವಿವಿಧೆಡೆ ರೈತರ ಬೆಳೆಗಳನ್ನು ವೀಕ್ಷಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಆರ್. ಶ್ರೀನಾಥ್, ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಕನಕಗಿರಿಯ ಆರಾಧ್ಯ ದೈವ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ದಾರೋಜಿ–ಬಾಗಲಕೋಟೆ ರೈಲು ಮಾರ್ಗವನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಿದೆ ಎಂದರು.
ಕಂಪ್ಲಿ–ಗಂಗಾವತಿ, ಕನಕಗಿರಿ–ತಾವರಗೇರಾ ಹಾಗೂ ಕುಷ್ಟಗಿ–ಇಳಕಲ್ ಮಾರ್ಗವಾಗಿ ಬಾಗಲಕೋಟೆ ಸಂಪರ್ಕಿಸುವ ಹೊಸ ರೈಲು ಮಾರ್ಗಕ್ಕಾಗಿ ಮುಂದಿನ ದಿನಗಳಲ್ಲಿ ಕನಕಗಿರಿ, ತಾವರಗೇರಾ ಹಾಗೂ ಕುಷ್ಟಗಿ ಭಾಗದಲ್ಲಿ ಹೋರಾಟ ಆರಂಭಿಸಲಾಗುವುದು. ಕನಕಗಿರಿಯಲ್ಲಿ ಸಾಮಾಜಿಕ ಹೋರಾಟಗಾರ ದುರ್ಗಾದಾಸ ಯಾದವ್ ಅವರ ನೇತೃತ್ವದಲ್ಲಿ ಹೋರಾಟ ಮುನ್ನಡೆಸಲಾಗುವುದು ಎಂದು ತಿಳಿಸಿದರು.
ಇಬ್ಬರು ಸಚಿವರಿಂದ ಜಿಲ್ಲೆಯ ಅಭಿವೃದ್ಧಿಗೆ ವೇಗ
ಕೊಪ್ಪಳ ಜಿಲ್ಲೆಗೆ ಇಬ್ಬರು ಕ್ಯಾಬಿನೆಟ್ ಸಚಿವರು ದೊರೆತಿರುವುದು ಜಿಲ್ಲೆಯ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿರೀಕ್ಷೆ ಮೂಡಿಸಿದೆ. ಇಬ್ಬರು ಸಚಿವರು ಜಂಟಿಯಾಗಿ ಪ್ರವಾಸೋದ್ಯಮ, ಮೂಲಸೌಕರ್ಯ, ಕೈಗಾರಿಕೆ, ಸಂಪರ್ಕ ವ್ಯವಸ್ಥೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದರೆ ಗಂಗಾವತಿ–ಕನಕಗಿರಿ ಭಾಗವನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಸಾಧ್ಯ ಎಂದು ಶ್ರೀನಾಥ್ ಅಭಿಪ್ರಾಯಪಟ್ಟರು.
ನಂತರ ಪಟ್ಟಣದ ಸಜ್ಜನ ಬಂಧುಗಳ ಮದುವೆ ಅರತಕ್ಷತೆಯಲ್ಲಿ ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ದುರ್ಗಾದಾಸ ಯಾದವ್, ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ರಾಜಶೇಖರ್ ಮುಷ್ಟೂರ್, ಅಮರಪ್ಪ ಗದ್ದಿ, ವೀರನಗೌಡ, ಹನುಮಂತರಾಯ, ಹನುಮೇಶ್ ಗಂಗಾಮತ, ಸೋಮಶೇಖರಯ್ಯ ಸ್ವಾಮಿ, ವೀರೇಶ್ ಭೋವಿ, ದೇವಸ್ಥಾನದ ವ್ಯವಸ್ಥಾಪಕ ಸಿದ್ದಲಿಂಗಯ್ಯ ಸ್ವಾಮಿ, ಅರ್ಚಕರು, ದೇವಸ್ಥಾನದ ಸಿಬ್ಬಂದಿ, ಭಕ್ತರು ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *