October 7, 2026
IMG-20260902-WA0029

ವರದಿ: ಶರಣು ಮರಾಠಿ.

ಕನಕಗಿರಿ, ಸೆ.2: ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳ ಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ (ಕರ್ನಾಟಕ) ಜಿಲ್ಲಾ ಸಂಸ್ಥೆ, ಕೊಪ್ಪಳ ಸಹಯೋಗದಲ್ಲಿ ಸೆ.2 ಮತ್ತು 3ರಂದು ಜಿಲ್ಲಾ ಮಟ್ಟದ ಸ್ಕೌಟ್ಸ್–ಗೈಡ್ಸ್ ಪ್ರೇರಣಾ ಶಿಬಿರ ನಡೆಯಲಿದೆ.
ಶಿಬಿರವನ್ನು ಕನಕಗಿರಿ ಶಾಸಕ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಉದ್ಘಾಟಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಬಜರಂಗಬಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ವಿಶ್ವವಿದ್ಯಾಲಯ ಹಾಗೂ ಅದರ ಅಧೀನದ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳ ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತ ಡಾ. ಪಿ.ಜಿ.ಆರ್. ಸಿಂಧ್ಯಾ, ಕನಕಗಿರಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ, ತಹಶೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ, ತಾಲೂಕು ಪಂಚಾಯಿತಿ ಇಒ ಕೆ. ರಾಜಶೇಖರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ತಾಲೂಕು ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರಪ್ಪ ಕಂಚಿ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.

Leave a Reply

Your email address will not be published. Required fields are marked *