October 7, 2026
IMG_20260904_101414

ವರದಿ : ಎಚ್ ಸಿ ಹಂಚಿನಾಳ
ಗಂಗಾವತಿ: 4 ದಲಿತರ ಮೇಲಿನ ದೌರ್ಜನ್ಯ, ಕೊಲೆ, ಅತ್ಯಾಚಾರ, ಜಾತಿ ನಿಂದನೆ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಬಹಿಷ್ಕಾರದ ಘಟನೆಗಳು ಮುಂದುವರಿಯುತ್ತಿವೆ ಎಂಬ ಆರೋಪದ ನಡುವೆಯೇ, ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸಂತ್ರಸ್ತರಿಗೆ ನ್ಯಾಯ ದೊರೆಯುವ ವೇಗ ಎಷ್ಟು? ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಈ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ದಲಿತ ಸೇನೆ ನೇತೃತ್ವದಲ್ಲಿ ಗುರುವಾರ ಗಂಗಾವತಿಯಲ್ಲಿ ‘ವಾಕ್ ಫಾರ್ ಜಸ್ಟೀಸ್’ ನಡೆಸಲಾಯಿತು. ದಲಿತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು, ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಬೇಕು ಹಾಗೂ ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.‌ದಲಿತ ಸೇನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಉಡಚಪ್ಪ ಶ್ರೀರಾಮನಗರ ನೇತೃತ್ವದಲ್ಲಿ ನಡೆದ ನಡಿಗೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭವಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ನಡಿಗೆ ಅಂಬೇಡ್ಕರ್ ವೃತ್ತ, ಬಾಬು ಜಗಜೀವನ್ ರಾಮ್ ವೃತ್ತದ ಮೂಲಕ ಬಸವಣ್ಣ ವೃತ್ತ ತಲುಪಿತು.
8,069 ಪ್ರಕರಣಗಳ ಉಲ್ಲೇಖ
ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಸಂಘಟನೆ ಉಲ್ಲೇಖಿಸಿರುವ ಅಂಕಿ-ಅಂಶಗಳು ಇದೀಗ ಚರ್ಚೆಗೆ ಕಾರಣವಾಗಿವೆ. 2018ರಿಂದ 2023ರವರೆಗೆ 4,227 ಪ್ರಕರಣಗಳು ದಾಖಲಾಗಿದ್ದರೆ, 2023ರಿಂದ 2026ರವರೆಗೆ 8,069 ಪ್ರಕರಣಗಳು ನಡೆದಿವೆ ಎಂದು ಸಂಘಟನೆ ತಿಳಿಸಿದೆ.
ಆದರೆ ಈ ಅಂಕಿ-ಅಂಶಗಳ ಮೂಲವೇನು? ಯಾವ ಇಲಾಖೆಯ ದಾಖಲೆ ಆಧರಿಸಿ ಈ ಸಂಖ್ಯೆ ನೀಡಲಾಗಿದೆ? ಪ್ರಕರಣಗಳ ಪೈಕಿ ಎಷ್ಟು ತನಿಖೆ ಪೂರ್ಣಗೊಂಡಿವೆ? ಎಷ್ಟು ಆರೋಪಪಟ್ಟಿಗಳು ಸಲ್ಲಿಕೆಯಾಗಿವೆ? ಎಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿವೆ? ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ? ಎಂಬ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಪ್ರಕರಣ ದಾಖಲಾಗುವುದಷ್ಟೇ ನ್ಯಾಯದ ಮಾನದಂಡವಲ್ಲ; ತನಿಖೆಯ ಗುಣಮಟ್ಟ, ಆರೋಪಪಟ್ಟಿ ಸಲ್ಲಿಕೆಯ ವೇಗ, ನ್ಯಾಯಾಲಯದಲ್ಲಿ ಪ್ರಕರಣದ ಪ್ರಗತಿ ಹಾಗೂ ಶಿಕ್ಷೆಯ ಪ್ರಮಾಣವೂ ಮುಖ್ಯ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
‘ಅಧಿಕಾರಿಗಳ ಹೊಣೆಗಾರಿಕೆಯೂ ನಿಗದಿಯಾಗಲಿ’
ದೌರ್ಜನ್ಯ ಪ್ರಕರಣದಲ್ಲಿ ದೂರು ಸ್ವೀಕರಿಸುವುದರಿಂದ ಹಿಡಿದು ಎಫ್‌ಐಆರ್, ತನಿಖೆ, ಸಾಕ್ಷ್ಯ ಸಂಗ್ರಹ, ಆರೋಪಪಟ್ಟಿ ಹಾಗೂ ಸಂತ್ರಸ್ತರಿಗೆ ಪರಿಹಾರ ಮತ್ತು ರಕ್ಷಣೆ ನೀಡುವವರೆಗೆ ಹಲವು ಹಂತಗಳಿವೆ.
ಈ ಹಂತಗಳಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಹೊಣೆಗಾರಿಕೆ ನಿಗದಿಪಡಿಸಬೇಕು. ಕರ್ತವ್ಯಲೋಪ ಎಸಗುವ ಪೊಲೀಸ್ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆ ಆಗ್ರಹಿಸಿದೆ.
ಕಾನೂನು ಇದೆ… ಜಾರಿ ಎಲ್ಲಿದೆ?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಸೇರಿದಂತೆ ಹಲವು ಕಾನೂನುಗಳಿದ್ದರೂ ಜಾತಿ ಆಧಾರಿತ ದೌರ್ಜನ್ಯ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಬಹಿಷ್ಕಾರದ ಘಟನೆಗಳು ಮುಂದುವರಿಯುತ್ತಿವೆ ಎಂಬುದು ಸಂಘಟನೆಯ ಆರೋಪ.
ಹೀಗಾಗಿ ಸಮಸ್ಯೆ ಕಾನೂನುಗಳ ಕೊರತೆಯಲ್ಲವೇ? ಅಥವಾ ಕಾನೂನು ಜಾರಿಯಲ್ಲಿನ ವೈಫಲ್ಯವೇ? ಎಂಬುದನ್ನು ಸರ್ಕಾರ ಪರಿಶೀಲಿಸಬೇಕು ಎಂದು ಒತ್ತಾಯಿಸಲಾಯಿತು.
ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವುದು, ದಲಿತ ಮಹಿಳೆಯರು ಹಾಗೂ ಯುವಕರ ಸುರಕ್ಷತೆಗೆ ವಿಶೇಷ ನಿಗಾ ವ್ಯವಸ್ಥೆ ರೂಪಿಸುವುದು ಮತ್ತು ಕಾನೂನು ಅರಿವು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
‘ಪ್ರಭಾವಿಗಳಿಗೆ ಕಾನೂನು ಬೇರೆ ಆಗಬಾರದು’
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಆಶ್ವಿನಿ ಹಾಗೂ ಲಿಂಗಸಗೂರು ತಾಲೂಕಿನ ರೇಣುಕಮ್ಮ ಅವರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಉಲ್ಲೇಖಿಸಿದ ಸಂಘಟನೆ, ಆರೋಪಿಗಳು ಯಾವುದೇ ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಪ್ರಭಾವ ಹೊಂದಿದ್ದರೂ ಕಾನೂನಿನ ಮುಂದೆ ರಿಯಾಯಿತಿ ನೀಡಬಾರದು ಎಂದು ಆಗ್ರಹಿಸಿತು.
ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಿ ವೈಜ್ಞಾನಿಕ ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುವುದರ ಜತೆಗೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಹಾಗೂ ಜೀವನೋಪಾಯದ ನೆರವು ನೀಡಬೇಕು ಎಂದು ಒತ್ತಾಯಿಸಲಾಯಿತು.
“ದಲಿತರ ಮೇಲಿನ ದೌರ್ಜನ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನ್ಯಾಯ ದೊರೆಯದಿದ್ದರೆ ಸಂವಿಧಾನಬದ್ಧ ಮಾರ್ಗದಲ್ಲಿ ರಾಜ್ಯವ್ಯಾಪಿ ಹೋರಾಟ ತೀವ್ರಗೊಳಿಸಲಾಗುವುದು. ಮುಂದಿನ ಪರಿಸ್ಥಿತಿಗೆ ಸರ್ಕಾರವೇ ಹೊಣೆ” ಎಂದು ಉಡಚಪ್ಪ ಶ್ರೀರಾಮನಗರ ಎಚ್ಚರಿಸಿದರು.
ನಂತರ ಸಮಾಜ ಕಲ್ಯಾಣ ಸಚಿವರಿಗೆ ಸಲ್ಲಿಸುವ ಮನವಿಯನ್ನು ಗಂಗಾವತಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹುಲುಗಪ್ಪ ಭಾವಜಿ, ತಹಶೀಲ್ದಾರ್ ಯು. ವಸಂತಕುಮಾರಿ ಹಾಗೂ ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ್ ಯಾತನೂರು ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ ಕಾತರಕಿ, ಶಿವಕುಮಾರ್ ಡಿ., ಹನುಮಂತ ನಾಯಕ, ಗೋಪಾಲ ವಕೀಲರು, ನಾಗೇಶ ಸಣಾಪುರ, ದೇವರಾಜು ಉಳೆನೂರು, ಆನಂದ ಇಟಗಿ, ತಾಲೂಕು ಅಧ್ಯಕ್ಷ ಮಂಜುನಾಥ್ ಜಿ., ಮುದಿಯಪ್ಪ ಯಾಟಿ, ವೆಂಕೋಬ ನಾಯಕ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *