ಗಂಗಾವತಿ: ಸಮಾಜದಲ್ಲಿ ಗಂಭೀರ ಘಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸುವುದಕ್ಕಿಂತ ನೋವಿನಲ್ಲಿರುವ ಕುಟುಂಬಗಳ ಪರ ನಿಲ್ಲುವುದು ಮುಖ್ಯ ಎಂಬ ಸಂದೇಶವನ್ನು ಭೀಮ ಪ್ರಜಾ ಸಂಘ (ರಿ) ರಾಜ್ಯಾಧ್ಯಕ್ಷ ವೈಟ್‌ಫೀಲ್ಡ್ ಮುರಗೇಶ್ ನೀಡಿದ್ದಾರೆ.
ಗಂಗಾವತಿ ನಗರದ ಸಾಹಿತ್ಯ ಭವನದಲ್ಲಿ ಭೀಮ ಪ್ರಜಾ ಸಂಘದ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯಾಧ್ಯಕ್ಷ ವೈಟ್‌ಫೀಲ್ಡ್ ಮುರಗೇಶ್ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆದಿತ್ತು.
ಆದರೆ, ರಾಯಚೂರು ಜಿಲ್ಲೆಯ ಅಶ್ವಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಸಮಾಜವನ್ನು ಬೆಚ್ಚಿಬೀಳಿಸಿರುವ ಹಲವು ಘಟನೆಗಳ ಹಿನ್ನೆಲೆಯಲ್ಲಿ ಸದ್ಯ ಅದ್ದೂರಿ ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹೀಗಾಗಿ ತಾಲ್ಲೂಕು ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಮುಂದೂಡಲು ತೀರ್ಮಾನಿಸಲಾಯಿತು.
“ಸಮಾಜದಲ್ಲಿ ನೋವು, ಆಕ್ರೋಶ ಮತ್ತು ಆತಂಕದ ವಾತಾವರಣವಿರುವಾಗ ನಾವು ಸಂಭ್ರಮದ ಕಾರ್ಯಕ್ರಮ ನಡೆಸುವುದು ಸರಿಯಲ್ಲ. ಮೊದಲು ಸಮಾಜದ ನೋವಿಗೆ ಸ್ಪಂದಿಸಬೇಕು. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು” ಎಂದು ರಾಜ್ಯಾಧ್ಯಕ್ಷ ವೈಟ್‌ಫೀಲ್ಡ್ ಮುರಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘಟನೆಯ ಉದ್ದೇಶಗಳನ್ನು ಜನರಿಗೆ ತಲುಪಿಸುವುದು, ಅಂಬೇಡ್ಕರ್ ಚಿಂತನೆಗಳನ್ನು ಬಲಪಡಿಸುವುದು ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಸಂಘಟನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ಕುರಿತು ಮುಖಂಡರು ಚರ್ಚಿಸಿದರು.
ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿ, ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು, ಕೊಪ್ಪಳ ಜಿಲ್ಲಾ ಅಧ್ಯಕ್ಷ ನಾಗರಾಜ್ ಕಟ್ಟಿಮನಿ, ಬಸವರಾಜ ಇಳಿಗನೂರು, ಅಂಬೇಡ್ಕರ್ ಚಿಂತಕರಾದ ಶಂಕರ, ವಿಜಯಕುಮಾರ್ ಸೇರಿದಂತೆ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
