October 7, 2026
IMG-20260831-WA0019

ರಾಯಚೂರು, ಆ.31: :ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕುಮಾರಿ ಅಶ್ವಿನಿ ಅವರ ನಿವಾಸಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ ಹಾಗೂ ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದ ನಿಯೋಗ ಶನಿವಾರ ಭೇಟಿ ನೀಡಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿತು.
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಮೂರ್ತಿ ಎಲ್. ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ದಲಿತ ಮುಖಂಡರೊಂದಿಗೆ ಗ್ರಾಮಕ್ಕೆ ಆಗಮಿಸಿದ ನಿಯೋಗ, ಅಶ್ವಿನಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿತು. ಬಳಿಕ ಕುಟುಂಬದ ಸದಸ್ಯರಿಂದ ಘಟನೆಯ ವಿವರಗಳನ್ನು ಪಡೆದು, ಕುಟುಂಬದ ಪ್ರಸ್ತುತ ಪರಿಸ್ಥಿತಿ ಹಾಗೂ ಅವರಿಗೆ ಅಗತ್ಯವಿರುವ ನೆರವಿನ ಕುರಿತು ಮಾಹಿತಿ ಪಡೆಯಿತು.
ಸರ್ಕಾರದ ನೆರವು ಶೀಘ್ರ ತಲುಪಿಸಲು ಸೂಚನೆ
ಕುಟುಂಬದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಿ. ನರೇಂದ್ರ, ನೊಂದ ಕುಟುಂಬಕ್ಕೆ ಸರ್ಕಾರದ ವತಿಯಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳು ಹಾಗೂ ಪರಿಹಾರ ಶೀಘ್ರವಾಗಿ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಅಶ್ವಿನಿ ಕುಟುಂಬಕ್ಕೆ ನ್ಯಾಯ ದೊರಕಿಸುವುದು ಸರ್ಕಾರ ಹಾಗೂ ಸಮಾಜದ ಜವಾಬ್ದಾರಿ. ಪ್ರಕರಣದ ತನಿಖೆ ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ನ್ಯಾಯಯುತವಾಗಿ ನಡೆಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನಡಿ ಕಠಿಣ ಶಿಕ್ಷೆಗೆ ಒಳಪಡಬೇಕು. ಕುಟುಂಬಕ್ಕೆ ನ್ಯಾಯ ದೊರೆಯುವವರೆಗೆ ಈ ವಿಚಾರದಲ್ಲಿ ನಿರಂತರವಾಗಿ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು.
ದಲಿತ ಹೋರಾಟಗಾರರ ಮೇಲೆ ಸುಳ್ಳು ಕೇಸ್ ಬೇಡ
ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ದಲಿತ ಮುಖಂಡರು, ಸಂಘಟನೆಗಳ ಕಾರ್ಯಕರ್ತರು ಹಾಗೂ ಹೋರಾಟಗಾರರನ್ನು ಹತ್ತಿಕ್ಕುವ ಉದ್ದೇಶದಿಂದ ಸುಳ್ಳು ಕೌಂಟರ್‌ ಕೇಸ್‌ಗಳನ್ನು ದಾಖಲಿಸುವ ಪ್ರಯತ್ನ ನಡೆಯಬಾರದು ಎಂದು ಸಿ. ನರೇಂದ್ರ ಎಚ್ಚರಿಸಿದರು.
ಅಂತಹ ಕ್ರಮಕ್ಕೆ ಅಧಿಕಾರಿಗಳು ಮುಂದಾದರೆ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವುದರ ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಸುವ್ಯವಸ್ಥೆ ಮತ್ತು ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಸಂಬಂಧಿಸಿದ ಇಲಾಖೆಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ; ಮನವಿ ಸ್ವೀಕಾರ
ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೂ ನಿಯೋಗ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿತು. ಈ ಸಂದರ್ಭದಲ್ಲಿ ಅಶ್ವಿನಿ ಪ್ರಕರಣದ ನ್ಯಾಯಯುತ ತನಿಖೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸ್ವೀಕರಿಸಲಾಯಿತು.
ಪ್ರತಿಯೊಂದು ಗ್ರಾಮ ಹಾಗೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಕುಂದುಕೊರತೆಗಳನ್ನು ಆಲಿಸಲು ನಡೆಸುವ ಸಭೆಗಳನ್ನು ಕೇವಲ ಕಾಟಾಚಾರಕ್ಕೆ ಸೀಮಿತಗೊಳಿಸದೆ, ಜನರ ನೈಜ ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಅಧಿಕಾರಿಗಳೊಂದಿಗೆ ಸಭೆ; ತನಿಖೆ ಪ್ರಗತಿ ಪರಿಶೀಲನೆ
ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಿಯೋಗ, ಪ್ರಕರಣದ ತನಿಖೆಯ ಪ್ರಗತಿ, ಕಾನೂನು ಸುವ್ಯವಸ್ಥೆ ಹಾಗೂ ಕುಟುಂಬಕ್ಕೆ ಕಲ್ಪಿಸಿರುವ ನೆರವಿನ ಕುರಿತು ಮಾಹಿತಿ ಪಡೆಯಿತು.
ಸಂತ್ರಸ್ತ ಕುಟುಂಬದ ಸುರಕ್ಷತೆ, ಅವರಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳು ಹಾಗೂ ಪರಿಹಾರ ಕ್ರಮಗಳಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಎಸ್ಸಿ/ಎಸ್ಟಿ ಆಯೋಗದ ಅಧ್ಯಕ್ಷ ಡಾ. ಮೂರ್ತಿ ಎಲ್., ಜಿಲ್ಲಾ ಎಸ್ಪಿ ಡಾ. ಅರುಣಾಂಗ್ಷು ಗಿರಿ, ರಾಯಚೂರು ಜಿಲ್ಲಾ ಎಡಿಸಿ ಡಾ. ಹಂಪಣ್ಣ ಸಜ್ಜನ್, ಸಿರವಾರ ತಹಸೀಲ್ದಾರ್ ಚಂದ್ರಶೇಖರ ಪವಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.
ಕೋಟ್
“ಅಶ್ವಿನಿ ಕುಟುಂಬಕ್ಕೆ ನ್ಯಾಯ ದೊರಕಿಸುವುದು ಸರ್ಕಾರದ ಜವಾಬ್ದಾರಿ. ಪ್ರಕರಣದ ತನಿಖೆ ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ನ್ಯಾಯಯುತವಾಗಿ ನಡೆಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನಡಿ ಕಠಿಣ ಶಿಕ್ಷೆಗೆ ಗುರಿಯಾಗಬೇಕು. ಕುಟುಂಬಕ್ಕೆ ನ್ಯಾಯ ದೊರೆಯುವವರೆಗೆ ಈ ವಿಚಾರದಲ್ಲಿ ನಿರಂತರವಾಗಿ ಧ್ವನಿ ಎತ್ತುತ್ತೇವೆ.”
— ಸಿ. ನರೇಂದ್ರ, ಅಧ್ಯಕ್ಷರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬೆಂಗಳೂರು

“””””ನೆರವು ತಲುಪಿಸಲು ಕಟ್ಟುನಿಟ್ಟಿನ ಸೂಚನೆ
ಸಂತ್ರಸ್ತ ಕುಟುಂಬಕ್ಕೆ ಸರ್ಕಾರದ ವತಿಯಿಂದ ದೊರೆಯಬೇಕಾದ ಎಲ್ಲ ರೀತಿಯ ಸೌಲಭ್ಯಗಳು ಹಾಗೂ ಪರಿಹಾರ ಶೀಘ್ರವಾಗಿ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.”””’

“””””. ಪ್ರತಿಭಟನಾ ಸ್ಥಳಕ್ಕೆ ಭೇಟಿ
ದಲಿತ ಸಂಘಟನೆಗಳ ಒಕ್ಕೂಟದ ಪ್ರತಿಭಟನಾ ಸ್ಥಳಕ್ಕೆ ನಿಯೋಗ ಭೇಟಿ ನೀಡಿ, ಪ್ರತಿಭಟನಾಕಾರರೊಂದಿಗೆ ಚರ್ಚಿಸಿತು. ಅಶ್ವಿನಿ ಪ್ರಕರಣದ ನ್ಯಾಯಯುತ ತನಿಖೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಲಾಯಿತು.”””””

Leave a Reply

Your email address will not be published. Required fields are marked *