ಕನಕಗಿರಿ,ಸೆ.21-
ತಾಲೂಕಿನ ಬಸರೀಹಾಳ ಗ್ರಾಮದ ಸರ್ವೆ ನಂ. 76/4ರ ಗುತ್ತೂರಪ್ಪ ಗೊಲ್ಲರ್ ಅವರ ಹೊಲದಲ್ಲಿ ಕುರಿ ಕಾಯುತ್ತಿದ್ದ ಇಬ್ಬರು ಕುರಿಗಾಹಿಗಳ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಮಧ್ಯಾಹ್ನ ಸುಮಾರು 12:30ರ ವೇಳೆಗೆ ನಡೆದಿದೆ.
ಕರಡಿ ದಾಳಿಗೆ ಹನುಮೇಶಪ್ಪ ತಂದೆ ಮರಿಯಪ್ಪ ಗೊಲ್ಲರ್ (36) ಹಾಗೂ ಯಮನೂರಪ್ಪ ತಂದೆ ಯಂಕಪ್ಪ ಗೊಲ್ಲರ್ (31) ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಕುರಿಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕರಡಿ ದಾಳಿ ನಡೆಸಿದ್ದು, ಕುರಿಗಾಹಿಗಳು ಆತಂಕಕ್ಕೊಳಗಾಗಿದ್ದಾರೆ. ಈ ವೇಳೆ ಸ್ಥಳೀಯರು ಜೋರಾಗಿ ಶಬ್ದ ಮಾಡಿ ಕೂಗಿದ ಹಿನ್ನೆಲೆಯಲ್ಲಿ ಕರಡಿ ಅಲ್ಲಿಂದ ತೆರಳಿದೆ. ತನ್ನ ಮರಿಗಳ ರಕ್ಷಣೆಗಾಗಿ ಕುರಿ ಗಾಯಗಳ ಮೇಲೆ ದಾಳಿ ನಡೆಸಿದ್ದು, ಕರಡಿ ಅಲ್ಲಿಯೇ ವಾಸವಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯರ ಸಮಯೋಚಿತ ಕಾರ್ಯದಿಂದ ಕರಡಿ ದಾಳಿಗೆ ಒಳಗಾದ ಇಬ್ಬರು ಕುರಿಗಾಹಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕರಡಿ ಸಂಚಾರದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಗ್ರಾಮಸ್ಥರಿಗೆ ಸೂಚಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
*ಚಿರುತೆ – ಕರಡಿ ಯನ್ನು ಹಿಡಿಯಲು ಸ್ಥಾನಿಕರ ಆಗ್ರಾಹ*
ಘಟನೆ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಹೊಲಗಳಿಗೆ ತೆರಳುವ ರೈತರು ಹಾಗೂ ಕುರಿಗಾಹಿಗಳ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕರಡಿಯ ಚಲನವಲನದ ಬಗ್ಗೆ ಪರಿಶೀಲನೆ ನಡೆಸಬೇಕು. ಜನವಸತಿ ಹಾಗೂ ಕೃಷಿ ಪ್ರದೇಶಗಳತ್ತ ಕರಡಿ ಬಾರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದರ ಜೊತೆಗೆ, ಕರಡಿಯನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
*ಚಿರತೆ–ಕರಡಿಯನ್ನು ಶೀಘ್ರದಲ್ಲೇ ಸೆರೆಹಿಡಿಯಲಾಗುವುದು: ಅಧಿಕಾರಿಗಳ ಭರವಸೆ*
ಕರಡಿ ದಾಳಿ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಚಿರತೆ ಹಾಗೂ ಕರಡಿಯ ಚಲನವಲನದ ಮೇಲೆ ನಿಗಾ ಇಟ್ಟು, ಶೀಘ್ರದಲ್ಲೇ ಅವುಗಳನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು .
ಕರಡಿ ದಾಳಿಯಿಂದ ಗಾಯಗೊಂಡಿರುವ ಹನುಮೇಶಪ್ಪ ಹಾಗೂ ಯಮನೂರಪ್ಪ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುವುದು. ಗಾಯಾಳುಗಳಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು.
– ಬಸವರಾಜ್ ಪೂಜಾರಿ,
ಅರಣ್ಯ ವಲಯ ಅಧಿಕಾರಿ (RFO)
