ಡಿ.ದೇವರಾಜ ಅರಸು ಜನ್ಮ ದಿನಾಚರಣೆ: ಅದ್ದೂರಿ ಮೆರವಣಿಗೆ
ಕೊಪ್ಪಳ : ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸು ರವರ 111ನೇ ಜನ್ಮ ದಿನಾಚರಣೆ ಅಂಗವಾಗಿ ಗುರುವಾರ (ಆ. 20ರಂದು) ಜಿಲ್ಲಾ ಕೇಂದ್ರದಲ್ಲಿ ಡಿ.ದೇವರಾಜ ಅರಸು ರವರ ಭಾವಚಿತ್ರ ಮೆರವಣಿಗೆಯೂ ಅದ್ದೂರಿಯಾಗಿ ನಡೆಯಿತು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ನಗರದ ಗವಿಶ್ರೀಮಠದ ಆವರಣದಿಂದ ಸಾಹಿತ್ಯ ಭವನದ ವರೆಗೆ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಗೆ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪ್ರಸನ್ನ ಗಡಾದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್. ಅರಸಿದ್ದಿ, ಕೊಪ್ಪಳ ತಹಶೀಲ್ದಾರ ಬಸವರಾಜ ತನ್ನಳ್ಳಿ, ಕೊಪ್ಪಳ ತಾ.ಪಂ. ಇಓ ದುಂಡಪ್ಪ ತುರಾದಿ, ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ನಾಗಮಣಿ ಹೊಸಮನಿ, ಕೊಪ್ಪಳ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಾಗರತ್ನ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಡಿ. ದೇವರಾಜ ಅರಸುರವರ ಭಾವಚಿತ್ರದ ಮೆರವಣಿಗೆಯು ಶ್ರೀ ಗವಿಸಿದ್ದೇಶ್ವರ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ವಿಜ್ರಂಭಣೆಯಿಂದ ನಡೆಯಿತು. ಮಹಿಳಾ ಕಲಾ ತಂಡಗಳಿಂದ ಡೋಳು ಕುಣಿತ ಮತ್ತು ಯುವ ಕಲಾ ತಂಡಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ವಿವಿಧ ವಸತಿ ಶಾಲೆಗಳ ಮತ್ತು ವಸತಿ ನಿಲಯಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
