ಪಿಂಚಣಿ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ಸೆ,2 ರಂದು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ,,
ಕೊಪ್ಪಳ : ಅರ್ಹ ಫಲಾನುಭವಿಗಳಿಗೆ ಸ್ಥಗಿತಗೊಂಡಿರುವ ಮಾಸಿಕ ಪಿಂಚಣಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಹಾಗೂ ಮರುಪರಿಶೀಲನೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕೆಂದು ಆಗ್ರಹಿಸಿ, ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) – ಎಸ್‌ಯುಸಿಐ(ಸಿ) ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಸೆಪ್ಟೆಂಬರ್ 2, 2026ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.
ಅವರು ಗುರುವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ
ರಾಜ್ಯ ಸರ್ಕಾರವು ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧರು, ವಿಧವೆಯರು, ವಿಕಲಚೇತನರು, ಅವಿವಾಹಿತ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ನೀಡಲಾಗುತ್ತಿದ್ದ ಪಿಂಚಣಿಯನ್ನು ಕಳೆದ ಐದು ತಿಂಗಳುಗಳಿಂದ ಸ್ಥಗಿತಗೊಳಿಸಿದೆ.
ಅನರ್ಹರನ್ನು ಪತ್ತೆಹಚ್ಚುವ ಮತ್ತು ದಾಖಲೆಗಳ ಮರುಪರಿಶೀಲನೆಯ ನೆಪವೊಡ್ಡಿ ಅರ್ಹ ಬಡ ಫಲಾನುಭವಿಗಳನ್ನೂ ಪಿಂಚಣಿಯಿಂದ ವಂಚಿಸಲಾಗುತ್ತಿದೆ. ಕೇವಲ ಎಸ್‌ಎಂಎಸ್ ಹಾಗೂ ನೋಟಿಸ್ ಮೂಲಕ ಮಾಹಿತಿ ನೀಡಿ ಜುಲೈ ಒಳಗಾಗಿ ದಾಖಲೆ ಸಲ್ಲಿಸಲು ಸೂಚಿಸಿರುವುದು ಅನಕ್ಷರಸ್ಥ ಗ್ರಾಮೀಣ ಜನರಲ್ಲಿ ತೀವ್ರ ಗೊಂದಲವನ್ನುಂಟುಮಾಡಿದೆ ಎಂದು ಪಕ್ಷ ಆರೋಪಿಸಿದೆ.
ಪ್ರಮುಖ ಆಕ್ಷೇಪಣೆಗಳು ಹಾಗೂ ಸಮಸ್ಯೆಗಳು:
ಅವೈಜ್ಞಾನಿಕ ಆದಾಯ ಮಿತಿ, ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ₹32,000ಕ್ಕೆ ನಿಗದಿಪಡಿಸಲಾಗಿದೆ. ನರೇಗಾ ಯೋಜನೆಯಲ್ಲಿ 100 ದಿನ ದುಡಿಯುವ ಕೂಲಿಕಾರ್ಮಿಕನೂ ವರ್ಷಕ್ಕೆ ₹36,900 ಗಳಿಸುವಾಗ, ಈ ಆದಾಯ ಮಿತಿ ತೀರಾ ಅವಾಸ್ತವಿಕವಾಗಿದೆ.
ಅಧಿಕಾರಿಗಳ ಅಲಭ್ಯತೆ: ಆದಾಯ ಪ್ರಮಾಣ ಪತ್ರ ನೀಡಬೇಕಾದ ಕಂದಾಯ ಅಧಿಕಾರಿಗಳು ಎಸ್‌ಎಸ್‌ಆರ್ ಪ್ರಕ್ರಿಯೆಯಲ್ಲಿ ನಿರತರಾಗಿದ್ದು, ಬಡವರು ದಿನನಿತ್ಯ ಕಚೇರಿಗಳ ಮುಂದೆ ಕ್ಯೂ ನಿಲ್ಲುವಂತಾಗಿದೆ.
ಮನೆ ಬಾಗಿಲಿಗೆ ಹೋಗಿ ದಾಖಲೆ ಸಂಗ್ರಹಿಸುವುದಾಗಿ ಹೇಳಿದ್ದ ಸರ್ಕಾರ, ಬಡವರನ್ನು ಅಲೆದಾಡಿಸುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದರು.
*ಹಕ್ಕೊತ್ತಾಯಗಳು :*
ಪಿಂಚಣಿ ಮರು ಪರಿಶೀಲನೆಗಾಗಿ ಪಂಚಾಯಿತಿ ಮಟ್ಟದಲ್ಲಿ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ, ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಹಳೆಯ ಬಾಕಿ ಸಹಿತ ಹಣ ಪಾವತಿಸಬೇಕು.
₹32,000 ವಾರ್ಷಿಕ ಆದಾಯ ಮಿತಿಯನ್ನು ರದ್ದುಪಡಿಸಿ, ಹಿಂದಿನಂತೆ ಬಿಪಿಎಲ್ ಪಡಿತರ ಚೀಟಿಯನ್ನೇ ಮಾನದಂಡವಾಗಿ ಪರಿಗಣಿಸಬೇಕು.
ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಬೇಕು ಮತ್ತು ಸೂಕ್ತ ಪ್ರಚಾರ ನೀಡಬೇಕು.
ಈ ಹೋರಾಟದಲ್ಲಿ ಸಾರ್ವಜನಿಕರು ಹಾಗೂ ಸಂತ್ರಸ್ತ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎಸ್‌ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯ ರಾಮಲಿಂಗಪ್ಪ ಅಲ್ಲಳ್ಳಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಮುಖಂಡ ಶರಣು ಗಡ್ಡಿ ಉಪಸ್ಥಿತರಿದ್ದು ಮಾತನಾಡಿ ಸಂಬಂಧಿಸಿದ ಫಲಾನುಭವಿ ಗಳು ಸೆಪ್ಟೆಂಬರ್ ೨ ರ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
