October 7, 2026
IMG_20260907_190114

ವರದಿ: ಎಚ್ ಸಿ ಹಂಚಿನಾಳ

ಗಂಗಾವತಿ: ಸೆ 7
ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಶಾಸಕ ಜನಾರ್ದನ ರೆಡ್ಡಿ ನೀಡಿರುವ ಹೇಳಿಕೆಗೆ ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ನಂದಾಪೂರಿ ತೀವ್ರ ತಿರುಗೇಟು ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಉಪಸ್ಥಿತರಿದ್ದ ಸಂದರ್ಭದಲ್ಲೇ ನಂದಾಪೂರಿ ರೆಡ್ಡಿ ಹೇಳಿಕೆಯನ್ನು ಕಟುವಾಗಿ ಖಂಡಿಸಿದರು.
“ರಾಜಕೀಯದ ಎಬಿಸಿಡಿ ಹೇಳುವ ಮೊದಲು ಜನಾರ್ದನ ರೆಡ್ಡಿ ತಮ್ಮದೇ ರಾಜಕೀಯ ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿಕೊಳ್ಳಲಿ. ಜೈಲಿನ ಅಧ್ಯಾಯ ಮರೆತು ಇತರರಿಗೆ ರಾಜಕೀಯ ಪಾಠ ಹೇಳಲು ಹೊರಟಿರುವುದು ವಿಪರ್ಯಾಸ. ಮಾತಿನ ಅಬ್ಬರದಿಂದ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ” ಎಂದು ನಂದಾಪೂರಿ ಕಿಡಿಕಾರಿದರು.
ತಂಗಡಗಿಯವರನ್ನು ಏಕವಚನದಲ್ಲಿ ಸಂಬೋಧಿಸಿರುವುದು ರೆಡ್ಡಿಯವರ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತದೆ. ರಾಜಕೀಯವಾಗಿ ಟೀಕೆ ಮಾಡಲಿ, ಆದರೆ ವೈಯಕ್ತಿಕ ದಾಳಿ ನಡೆಸುವ ಮೂಲಕ ರಾಜಕೀಯ ಭಾಷೆಯ ಮಟ್ಟವನ್ನು ಕೆಳಕ್ಕಿಳಿಸಬಾರದು ಎಂದು ಅವರು ಹೇಳಿದರು.
“ಶಿವರಾಜ್ ತಂಗಡಗಿ ಮೂರು ಬಾರಿ ಶಾಸಕರಾಗಿ, ನಾಲ್ಕು ಬಾರಿ ಸಚಿವರಾಗಿ ರಾಜಕೀಯ ಅನುಭವ ಹೊಂದಿದ್ದಾರೆ. ಅಂತಹ ಅನುಭವಿ ನಾಯಕನಿಗೆ ಪಾಠ ಹೇಳುವ ಮುನ್ನ ರೆಡ್ಡಿ ತಮ್ಮ ರಾಜಕೀಯ ಬದುಕಿನ ಲೆಕ್ಕವನ್ನು ಜನರ ಮುಂದೆ ಇಡಲಿ” ಎಂದು ನಂದಾಪೂರಿ ಸವಾಲು ಹಾಕಿದರು.
“ಅಧಿಕಾರ ಬೇಕಾದಾಗ ಯಾರ ಬೆಂಬಲ ಪಡೆದಿದ್ದರು, ರಾಜಕೀಯ ಸಮೀಕರಣ ಬದಲಾದಾಗ ಯಾರ ವಿರುದ್ಧ ಮಾತನಾಡುತ್ತಿದ್ದಾರೆ ಎಂಬುದನ್ನು ಜನರು ಮರೆತಿಲ್ಲ. ರಾಜಕೀಯ ಸಂದರ್ಭಕ್ಕೆ ತಕ್ಕಂತೆ ನಿಲುವು ಬದಲಿಸುವುದನ್ನು ಜನರು ಗಮನಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಇತಿಹಾಸವನ್ನು ಮರೆಮಾಚಿ ಎಷ್ಟೇ ದೊಡ್ಡ ಧ್ವನಿಯಲ್ಲಿ ಮಾತನಾಡಿದರೂ ಸತ್ಯ ಬದಲಾಗುವುದಿಲ್ಲ. ತಮ್ಮದೇ ರಾಜಕೀಯ ಇತಿಹಾಸದ ಅಧ್ಯಾಯಗಳನ್ನು ಮೊದಲು ಜನರ ಮುಂದೆ ಇಟ್ಟು, ನಂತರ ಬೇರೆಯವರಿಗೆ ಪಾಠ ಹೇಳಲಿ” ಎಂದು ನಂದಾಪೂರಿ ವ್ಯಂಗ್ಯವಾಡಿದರು.
ತಂಗಡಗಿ ವಿರುದ್ಧದ ಹೇಳಿಕೆಯನ್ನು ಹಿಂಪಡೆಯಬೇಕು. ವೈಯಕ್ತಿಕ ಕೆಸರೆರಚಾಟ ಬಿಟ್ಟು ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ಸವಾಲು ಹಾಕಿದರು.

Leave a Reply

Your email address will not be published. Required fields are marked *