October 7, 2026
Screenshot_20260907-105931

ಗಂಗಾವತಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಸಚಿವ ಶಿವರಾಜ ತಂಗಡಗಿ ನಡುವಿನ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದ್ದು, ಇದೀಗ ರಾಜೀನಾಮೆ ನೀಡಿ ಉಪಚುನಾವಣೆ ಎದುರಿಸುವ ಬಹಿರಂಗ ಸವಾಲಿನ ಹಂತಕ್ಕೆ ತಲುಪಿದೆ.
ಜನಾರ್ದನ ರೆಡ್ಡಿ ಅವರ ಹೇಳಿಕೆಗಳಿಗೆ ತೀವ್ರ ತಿರುಗೇಟು ನೀಡಿರುವ ಸಚಿವ ಶಿವರಾಜ ತಂಗಡಗಿ, “ನಿಮಗೆ ತಾಕತ್ತು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬನ್ನಿ. ನೀವು ರಾಜೀನಾಮೆ ನೀಡಿದ 24 ಗಂಟೆಯೊಳಗೆ ನಾನೂ ರಾಜೀನಾಮೆ ನೀಡುತ್ತೇನೆ. ಗಂಗಾವತಿಯಲ್ಲಿ ನನ್ನ ವಿರುದ್ಧ ಉಪಚುನಾವಣೆ ಎದುರಿಸಿ ನಿಮ್ಮ ಬಲಾಬಲ ತೋರಿಸಿ” ಎಂದು ಸವಾಲು ಹಾಕಿದ್ದಾರೆ.
“ನಾನು ಮೊದಲ ಬಾರಿಗೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಾಗ ‘ತಮ್ಮುಡು, ತಮ್ಮುಡು’ ಎಂದು ಬೆಂಬಲಕ್ಕಾಗಿ ಗೋಗರೆದವರು ಈಗ ನನ್ನ ವಿರುದ್ಧ ಸುಳ್ಳುಗಳ ಸರಮಾಲೆ ಹೆಣೆಯುತ್ತಿದ್ದಾರೆ. ಅಂದು ನಡೆದ ರಾಜಕೀಯ ಬೆಳವಣಿಗೆಗಳನ್ನು ಮರೆತು ಇಂದು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ” ಎಂದು ತಂಗಡಗಿ ತಿರುಗೇಟು ನೀಡಿದ್ದಾರೆ.
ತಮ್ಮಿಂದ ಹಣ ಪಡೆದಿದ್ದಾರೆ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿರುವ ಅವರು, “ನಿಮ್ಮಿಂದ ಹಣ ಪಡೆಯುವ ದುರ್ದೈವ ನನಗೆ ಬಂದಿಲ್ಲ. ನಾನು ಪಕ್ಷೇತರನಾಗಿ ಗೆದ್ದ ಸಂದರ್ಭದಲ್ಲಿ ನಿಮ್ಮವರು ನನ್ನ ಮನೆ ಮುಂದೆ ಬೆಂಬಲಕ್ಕಾಗಿ ಕಾದು ಕುಳಿತಿದ್ದನ್ನು ಮರೆಯಬೇಡಿ” ಎಂದು ಹೇಳಿದ್ದಾರೆ.
ಗಣಿ ಅಕ್ರಮ ಹಾಗೂ ಜೈಲು ವಿಚಾರವನ್ನು ಪ್ರಸ್ತಾಪಿಸಿ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ತಂಗಡಗಿ, “ಗಣಿ ಲೂಟಿ ಕಳ್ಳ ಎಂದು ಹೇಳಿದಾಗ ಉರಿದು ಬೀಳುವ ನೀವು ಮೊದಲು ನಿಮ್ಮ ರಾಜಕೀಯ ಇತಿಹಾಸವನ್ನು ನೆನಪಿಸಿಕೊಳ್ಳಿ. ನಾನು ಇನ್ನಷ್ಟು ಮಾತನಾಡಿದರೆ ನಿಮ್ಮ ಬಂಡವಾಳ ಬಯಲಾಗಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿನ ದೂರವಾಣಿ ಕರೆಗಳ ವಿಚಾರವನ್ನೂ ಪ್ರಸ್ತಾಪಿಸಿರುವ ಅವರು, “ನನಗೆ ಎಷ್ಟು ಬಾರಿ ಕರೆ ಮಾಡಿದ್ದೀರಿ ಎಂಬುದನ್ನು ಕಾಲ್‌ಲಿಸ್ಟ್ ಮೂಲಕ ಬಹಿರಂಗಪಡಿಸಿ. ಯಾರಿಗೆ ಮತ ಹಾಕಿದ್ದೀರಿ ಎಂಬುದನ್ನೂ ಜನರಿಗೆ ತಿಳಿಸಿ” ಎಂದು ಸವಾಲು ಹಾಕಿದ್ದಾರೆ.
ಗಂಗಾವತಿಯಲ್ಲಿ ಡಬಲ್ ಬೆಡ್‌ರೂಮ್ ಮನೆ ಹಾಗೂ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಂತಹ ಭರವಸೆಗಳ ಬಗ್ಗೆಯೂ ಪ್ರಶ್ನಿಸಿರುವ ತಂಗಡಗಿ, “ಸುಳ್ಳು ಆರೋಪ ಮಾಡುವುದಕ್ಕಿಂತ ಮೊದಲು ಜನರಿಗೆ ನೀಡಿದ್ದ ಭರವಸೆಗಳ ಈಡೇರಿಕೆ ಬಗ್ಗೆ ಉತ್ತರಿಸಿ” ಎಂದು ತಿರುಗೇಟು ನೀಡಿದ್ದಾರೆ.
ಒಟ್ಟಾರೆ, ಜನಾರ್ದನ ರೆಡ್ಡಿ–ಶಿವರಾಜ ತಂಗಡಗಿ ನಡುವಿನ ಮಾತಿನ ಸಮರ ಇದೀಗ ರಾಜೀನಾಮೆ ಮತ್ತು ಉಪಚುನಾವಣೆ ಸವಾಲಿಗೆ ತಿರುಗಿದ್ದು, ಗಂಗಾವತಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ತಂಗಡಗಿ ಹಾಕಿರುವ ಸವಾಲನ್ನು ರೆಡ್ಡಿ ಸ್ವೀಕರಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *