October 7, 2026
IMG-20260906-WA0131

*
ಕನಕಗಿರಿ :ಸೆ 7. ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದ ಮುಂಭಾಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶನಿವಾರ ರಾತ್ರಿ ಹಾಲುಗಂಬ ಉತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಸಂಭ್ರಮದ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಜಮಾಯಿಸಿದ್ದರು.
​ದೇವಸ್ಥಾನದ ಅರ್ಚಕ ಮನೆತನದವರು ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಇದಕ್ಕೂ ಮುಂಚೆ ಅಶ್ವರೋಹಣ ಉಚ್ಚಾಯ ನೆರವೇರಿತು.

ಗೊಲ್ಲ, ಯಾದವ ಸಮುದಾಯದವರು ಹಲವು ದಿನಗಳಿಂದ ಕಂಬಕ್ಕೆ ಎರಚಲೆಂದೇ 3 ದಿನಗಳ ಕಾಲ ಮಡಿಕೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಹಾಲು, ಮೊಸರು, ತುಪ್ಪ ಮತ್ತು ಮಜ್ಜಿಗೆಯನ್ನು ಹೊತ್ತುಕೊಂಡು ಎದುರು ಹನುಮಪ್ಪ ದೇವಸ್ಥಾನದಿಂದ ಶ್ರೀ ಕನಕಾಚಲಪತಿ ದೇವಸ್ಥಾನದವರೆಗೂ ಉಚ್ಚಾಯದೊಂದಿಗೆ ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು.

*ಹಾಲುಗಂಬ ಹತ್ತುವ ಸಾಹಸ ಕಣ್ತುಂಬಿಕೊಂಡ ಅಪಾರ ಜನಸ್ತೋಮ :*
ಕಂಬಕ್ಕೆ ಜಿಡ್ದುಗಟ್ಟಿದ ಪದಾರ್ಥ ಹಾಗೂ ಹೈನು ಪದಾರ್ಥಗಳನ್ನು ಲೇಪಿಸಲಾಗಿದ್ದು, ಕಂಬದ ಮೇಲೆ ಕುಳಿತ ವ್ಯಕ್ತಿಯೊಬ್ಬ ಹಾಲು, ಮೊಸರು ಹಾಗೂ ಮಜ್ಜಿಗೆ ಮಿಶ್ರಿತ ಹೈನು ಪದಾರ್ಥವನ್ನು ಕಂಬದ ಮೂಲಕ ಸುರಿದಾಗ ಕಂಬ ಏರಲು ಗೊಲ್ಲರು ಹರಸಾಹಸ ಪಟ್ಟರೆ, ಸೇರಿರುವ ಭಕ್ತ ಸಮೂಹ ಗೋವಿಂದ ನಾಮಸ್ಮರಣೆಯ ಮೂಲಕ ಧನ್ಯತಾ ಭಾವ ಮೆರೆಯಿತು. ರೋಹಿಣಿ ನಕ್ಷತ್ರದಲ್ಲಿ ಗೊಲ್ಲ ಸಮುದಾಯದ ಯುವಕರು ದೇವಸ್ಥಾನದ ಮುಂಭಾಗದಲ್ಲಿದ್ದ ಹಾಲುಗಂಬ ಹತ್ತಲು ಶ್ರದ್ಧಾ ಭಕ್ತಿಯಿಂದ ಒಬ್ಬರ ಮೇಲೆ ಒಬ್ಬರು ಸ್ಪರ್ಧೆ ಏರ್ಪಡಿಸಿದರು. ಕೊಟ್ಟಿರುವ ಐದು ಅವಕಾಶಗಳನ್ನು ಬಳಸಿಕೊಂಡು ಕೊನೆಗೆ ಹಾಲುಗಂಬ ಹತ್ತಿ, ತುದಿಯಲ್ಲಿ ಕಟ್ಟಿರುವ ಚಕ್ಕಲಿ, ಉತ್ತತ್ತಿ, ಕೊಬ್ಬರಿಯನ್ನು ತಂದು ಯುವಕರಿಗೆ ಹಂಚಲಾಯಿತು. ಜನಮನ ಸೆಳೆದ ಈ ಸಾಂಪ್ರದಾಯಿಕ ಹಾಲುಗಂಬ ಉತ್ಸವವು ಅತ್ಯಂತ ಸಡಗರದಿಂದ ಸಂಪೂರ್ಣಗೊಂಡಿತು.

ಪಟ್ಟಣ ಸೇರಿದಂತೆ ಬಂಕಾಪುರ, ಗುಡದೂರ, ಕರಡಿಗುಡ್ಡ, ಚಿಕ್ಕಮಾದಿನಾಳ, ಉಮಳಿ ಕಾಟಾಪುರ, ಹಿರೇಮಾದಿನಾಳ ಮುಂತಾದ ತಾಲ್ಲೂಕಿನ ವಿವಿಧ ಗ್ರಾಮಗಳ ಯಾದವ, ಗೊಲ್ಲ ಸಮುದಾಯದ ಮುಖಂಡರು ಹಾಗೂ ಮಹಿಳೆಯರು ಮತ್ತು ಪಟ್ಟಣದ ಸಾವಿರಾರು ಭಕ್ತರು ಈ ಉತ್ಸವದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *