October 7, 2026
Oplus_0

Oplus_0

ಬೆಂಗಳೂರು: ರೈಲಿನ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ವಂಚಿತರಾದ ಅಭ್ಯರ್ಥಿಗಳ ಪರವಾಗಿ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ವಿಜಯಪುರ–ಯಶವಂತಪುರ (16548) ರೈಲು ನಾಲ್ಕು ಗಂಟೆಗೂ ಅಧಿಕ ವಿಳಂಬವಾದ ಪರಿಣಾಮ 500ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಅಭ್ಯರ್ಥಿಗಳ ಯಾವುದೇ ತಪ್ಪಿಲ್ಲದೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿರುವುದು ಖಂಡನೀಯ ಎಂದು ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಅಮರೇಶ ಕಡಗದ ಹೇಳಿದ್ದಾರೆ.
ವರ್ಷಗಟ್ಟಲೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯ ತಾಂತ್ರಿಕ ದೋಷದಿಂದ ಅನ್ಯಾಯವಾಗಬಾರದು. ಪರೀಕ್ಷೆಯಿಂದ ವಂಚಿತರಾದ ಎಲ್ಲ ಅರ್ಹ ಅಭ್ಯರ್ಥಿಗಳಿಗೆ ವಿಶೇಷ ಮರುಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಶುಲ್ಕ ಪಾವತಿಸಿರುವುದರಿಂದ ಮರುಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದು. ಮರುಪರೀಕ್ಷೆಯ ದಿನಾಂಕ ಹಾಗೂ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಕೂಡಲೇ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಪರೀಕ್ಷಾರ್ಥಿಗಳ ಭವಿಷ್ಯದೊಂದಿಗೆ ನಿರ್ಲಕ್ಷ್ಯ ವಹಿಸಿರುವುದನ್ನು ಡಿವೈಎಫ್ಐ ತೀವ್ರವಾಗಿ ಖಂಡಿಸುತ್ತದೆ. ರೈಲು ತಾಂತ್ರಿಕ ದೋಷಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಮುಂದಿನ ಪರೀಕ್ಷಾ ದಿನಗಳಲ್ಲಿ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಮರೇಶ ಕಡಗದ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *