October 7, 2026
IMG-20260906-WA0136

“”ಒಂದೇ ಜಮೀನಿಗೆ ನಗರಸಭೆಯ ಎರಡು ಹಿಂಬರಹ — ಜೂನ್‌ನಲ್ಲಿ ‘ಕಡತ ಲಭ್ಯವಿಲ್ಲ’; ಆಗಸ್ಟ್‌ನಲ್ಲಿ ‘2025ರಲ್ಲೇ ದಾಖಲೆ ನೀಡಲಾಗಿದೆ’!”””

ಗಂಗಾವತಿ, ಸೆ. 6: ಒಂದೇ ಜಮೀನಿಗೆ ಸಂಬಂಧಿಸಿದಂತೆ ಗಂಗಾವತಿ ನಗರಸಭೆ ನೀಡಿರುವ ಎರಡು ಪ್ರತ್ಯೇಕ ಹಿಂಬರಹಗಳು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಒಂದು ಹಿಂಬರಹದಲ್ಲಿ ‘ಕಡತ ಲಭ್ಯವಿಲ್ಲ’ ಎಂದು ಹೇಳಿದ್ದರೆ, ಮತ್ತೊಂದರಲ್ಲಿ ‘2025ರಲ್ಲೇ ದಾಖಲೆ ನೀಡಲಾಗಿದೆ’ ಎಂದು ಉಲ್ಲೇಖಿಸಿರುವುದು ದಾಖಲೆಗಳ ಲಭ್ಯತೆ ಹಾಗೂ ಕಡತ ನಿರ್ವಹಣೆಯ ಬಗ್ಗೆ ಗೊಂದಲಕ್ಕೆ ಕಾರಣವಾಗಿದೆ.ಜೋಗೀನ ರಮೇಶ್ ಆರೋಪ ಮಾಡಿದ್ದರು.

ಗಂಗಾವತಿ ಗ್ರಾಮದ ಸರ್ವೆ ನಂ.46/2 ಮತ್ತು 46/3ಕ್ಕೆ ಸಂಬಂಧಿಸಿದ ವಸತಿ ವಿನ್ಯಾಸ ಹಾಗೂ ಮೂಲ ದಾಖಲೆಗಳ ನಕಲು ಪ್ರತಿಗಳನ್ನು ಕೋರಿ ರಮೇಶ್ ಜೋಗಿನ್ ನಾಯಕ, ತಂದೆ ಹುಲಗಪ್ಪ ನಾಯಕ ಅವರು ನಗರಸಭೆಗೆ ಅರ್ಜಿ ಸಲ್ಲಿಸಿದ್ದರು.
ಜೂನ್‌ನಲ್ಲಿ ಕಡತವೇ ಇಲ್ಲ!
ನಗರಸಭೆಯ 29-06-2026ರ ಹಿಂಬರಹದಲ್ಲಿ, ನಂ. ನಸಗಂ/ವಿನ್ಯಾಸ/33-07/2026-27ರಡಿ ಸ.ನಂ.46/2 ಮತ್ತು 46/3, ಒಟ್ಟು 07 ಎಕರೆ 09 ಗುಂಟೆ ಜಮೀನಿಗೆ ಸಂಬಂಧಿಸಿದ ವಸತಿ ವಿನ್ಯಾಸದ ಕಡತ ವಿನ್ಯಾಸ ವಿಭಾಗದಲ್ಲಿ ಲಭ್ಯವಿಲ್ಲ ಎಂದು ತಿಳಿಸಲಾಗಿದೆ.
ಹೀಗಾಗಿ ಅರ್ಜಿದಾರರು ಕೋರಿದ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಅರ್ಜಿ ವಿಲೇವಾರಿ ಮಾಡಲಾಗಿದೆ.
ಎರಡು ತಿಂಗಳ ಬಳಿಕ ದಾಖಲೆ ‘ಪ್ರತ್ಯಕ್ಷ’!
ಆದರೆ 27-08-2026ರ ಮತ್ತೊಂದು ಹಿಂಬರಹದಲ್ಲಿ ಸ.ನಂ.46/2ಕ್ಕೆ ಸಂಬಂಧಿಸಿದಂತೆ ವಿಭಿನ್ನ ಮಾಹಿತಿ ನೀಡಲಾಗಿದೆ.
ಈ ಹಿಂಬರಹದಲ್ಲಿ 12-03-2025 ಮತ್ತು 09-09-2025ರಂದು ಸಂಬಂಧಪಟ್ಟ ದಾಖಲೆಗಳು/ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ 1988-89ರ ಜಮೀನು ದಾಖಲೆಗಳ ಬಗ್ಗೆಯೂ ಉಲ್ಲೇಖವಿದೆ.
ಇದರಿಂದ ಸಹಜವಾಗಿಯೇ ಪ್ರಶ್ನೆ ಮೂಡಿದೆ:
ಜೂನ್‌ನಲ್ಲಿ ಕಡತ ಲಭ್ಯವಿಲ್ಲ ಎಂದಿದ್ದರೆ, 2025ರಲ್ಲಿ ದಾಖಲೆಗಳನ್ನು ನೀಡಿದ್ದು ಹೇಗೆ?
ದಾಖಲೆಗಳನ್ನು ನೀಡಲಾಗಿದ್ದರೆ, ಅವು ಯಾವ ಮೂಲ ಕಡತದ ಆಧಾರದ ಮೇಲೆ ನೀಡಲಾಯಿತು? ಆ ಕಡತ ಎಲ್ಲಿತ್ತು? ಯಾರ ವಶದಲ್ಲಿತ್ತು? ಯಾವ ಅಧಿಕಾರಿ ಪರಿಶೀಲಿಸಿ ದಾಖಲೆ ನೀಡಿದರು? ಎಂಬ ಪ್ರಶ್ನೆಗಳಿಗೆ ನಗರಸಭೆ ಸ್ಪಷ್ಟ ಉತ್ತರ ನೀಡಬೇಕಾಗಿದೆ.
ವಿಸ್ತೀರ್ಣದಲ್ಲೂ ಗೊಂದಲ
ಸ.ನಂ.46/2ರ ವಿಸ್ತೀರ್ಣದ ವಿವರದಲ್ಲಿಯೂ ವ್ಯತ್ಯಾಸ ಕಂಡುಬರುತ್ತಿದೆ. ಒಂದು ಕಡೆ 3 ಎಕರೆ 24 ಗುಂಟೆ, ಮತ್ತೊಂದು ಕಡೆ 3 ಎಕರೆ 25 ಗುಂಟೆ ಎಂಬ ಉಲ್ಲೇಖವಿರುವುದಾಗಿ ಅರ್ಜಿದಾರರು ತಿಳಿಸಿದ್ದಾರೆ.
ಹೀಗಾಗಿ ಸರ್ವೆ ನಂಬರ್, ವಿಸ್ತೀರ್ಣ, ಮೂಲ ಜಮೀನು ದಾಖಲೆ, ಲೇಔಟ್ ಅನುಮೋದನೆ ಹಾಗೂ ಕಡತದ ಚಲನವಲನವನ್ನು ಮೂಲ ದಾಖಲೆಗಳೊಂದಿಗೆ ಪರಿಶೀಲಿಸುವ ಅಗತ್ಯವಿದೆ.
ಎರಡು ಹಿಂಬರಹಗಳಿಗೆ ಒಂದೇ ಉತ್ತರ ಬೇಕು
ಒಂದೇ ಜಮೀನಿಗೆ ಸಂಬಂಧಿಸಿದಂತೆ ಎರಡು ಅಧಿಕೃತ ಹಿಂಬರಹಗಳಲ್ಲಿ ಭಿನ್ನ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ, ಯಾವ ಹಿಂಬರಹದಲ್ಲಿನ ಮಾಹಿತಿ ಸರಿಯಾಗಿದೆ? ಎಂಬುದನ್ನು ನಗರಸಭೆ ಸ್ಪಷ್ಟಪಡಿಸಬೇಕು.
ಇದು ಅಧಿಕಾರಿಗಳ ವಿರುದ್ಧ ಯಾವುದೇ ಪೂರ್ವನಿರ್ಧಾರಿತ ಆರೋಪವಲ್ಲ. ಆದರೆ ದಾಖಲೆಗಳಲ್ಲಿನ ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ಮೂಲ ಕಡತಗಳ ಪರಿಶೀಲನೆಯ ಮೂಲಕ ಸಾರ್ವಜನಿಕರಿಗೆ ತಿಳಿಸುವುದು ಅಗತ್ಯವಾಗಿದೆ.
ಜಿಲ್ಲಾಧಿಕಾರಿಗಳಿಂದ ತನಿಖೆಗೆ ಆಗ್ರಹ
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ನಗರಾಭಿವೃದ್ಧಿ ಅಧಿಕಾರಿಗಳು ಮಧ್ಯಪ್ರವೇಶಿಸಿ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ.
ಸ.ನಂ.46/2 ಮತ್ತು 46/3ರ ಮೂಲ ಕಡತ ಎಲ್ಲಿದೆ? 2025ರಲ್ಲಿ ದಾಖಲೆಗಳನ್ನು ಯಾರಿಗೆ ನೀಡಲಾಯಿತು? ಯಾವ ಕಡತದ ಆಧಾರದ ಮೇಲೆ ನೀಡಲಾಯಿತು? ಜೂನ್‌ನಲ್ಲಿ ಕಡತ ಲಭ್ಯವಿಲ್ಲ ಎಂದು ಹೇಳಲು ಕಾರಣವೇನು? ಎರಡು ಹಿಂಬರಹಗಳಲ್ಲಿನ ವ್ಯತ್ಯಾಸಕ್ಕೆ ಕಾರಣವೇನು? ಎಂಬುದನ್ನು ತನಿಖೆ ಮೂಲಕ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *