ಕನಕಗಿರಿ,ಅ.3-
ಪಟ್ಟಣದ ವಾರ್ಡ್ ನಂ.05ರ ಮಹೆಬೂಬ್ ನಗರದಲ್ಲಿರುವ ಶ್ರೀ ಕಂಠೀರಂಗನಾಥ (ಶ್ರೀ ತೊಂಡಿತೇವರಪ್ಪ) ದೇವಸ್ಥಾನಕ್ಕೆ ಹೋಗುವ ರಸ್ತೆಯ ಕಮಾನಿನ ಎಡಭಾಗದಲ್ಲಿರುವ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಬಳಿ ಈಗ ತೀವ್ರ ನಿರ್ಲಕ್ಷ್ಯ ಹಾಗೂ ನೈರ್ಮಲ್ಯದ ಕೊರತೆ ಎದುರಾಗಿದೆ.
ಕುಡಿಯುವ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ ಈ ನೀರಿನ ಟ್ಯಾಂಕ್ ಬಳಿ ಕೆಲವರು ಅಕ್ರಮವಾಗಿ ಬಟ್ಟೆ ಹಾಗೂ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ನೀರಿನ ಹಾಹಾಕಾರ ಉಂಟಾಗುವುದರ ಜೊತೆಗೆ, ಕೊಳಚೆ ನೀರು ನಿಂತು ದೊಡ್ಡ ಮಟ್ಟದಲ್ಲಿ ಪಾಚಿ ಕಟ್ಟಿದೆ.
ಟ್ಯಾಂಕ್ ಸುತ್ತಲೂ ನೀರು ನಿಂತು ಕಸ, ಕಡ್ಡಿ, ತ್ಯಾಜ್ಯ ಸಂಗ್ರಹಗೊಂಡು ಕೊಳೆತು ಹೋಗಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಸ್ಥಳೀಯ ವಾಸಿಗಳಿಗೆ ಹಾಗೂ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಗಂಭೀರ ಆತಂಕ ಎದುರಾಗಿದೆ.
ಸಾರ್ವಜನಿಕರ ಮತ್ತು ಭಕ್ತರ ಬಾಯಾರಿಕೆ ನೀಗಿಸಬೇಕಾದ ಈ ಕುಡಿಯುವ ನೀರಿನ ಟ್ಯಾಂಕ್ ದುರ್ಬಳಕೆಯಾಗುತ್ತಿರುವುದನ್ನು ತಡೆದು, ತಕ್ಷಣವೇ ಟ್ಯಾಂಕ್ ಅನ್ನು ಸ್ವಚ್ಘಗೊಳಿಸಿ, ಸುತ್ತಲಿನ ಪರಿಸರವನ್ನು ನೈರ್ಮಲ್ಯೀಕರಿಸಬೇಕು ಎಂದು ಸ್ಥಳೀಯ ನಿವಾಸಿ ರಾಘವೇಂದ್ರ ತೆಗ್ಗಿಹಾಳ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ಆರೋಗ್ಯ ಮತ್ತು ಸ್ವಚ್ಘತೆಯ ಹಿತದೃಷ್ಟಿಯಿಂದ ಮುಖ್ಯ ಅಧಿಕಾರಿಗಳು ತಕ್ಷಣವೇ ಈ ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಬಲವಾಗಿ ಒತ್ತಾಯಿಸಿದ್ದಾರೆ.
