October 7, 2026
IMG-20260915-WA0032

*

*ಕನಕಗಿರಿ, ಸೆ.15-*
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಹೊಸದಾಗಿ ಪ್ರವೇಶ ಪಡೆದಿರುವ ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಪ್ರಥಮ ದರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ‘ಹೊಸದಿಗಂತ’ ಹೆಸರಿನ ಅಭಿವಿನ್ಯಾಸ (ಪರಿಚಯಾತ್ಮಕ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಸ್ಥಾನವನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಜರಂಗಬಲಿ ಅವರು, ಪದವಿ ಶಿಕ್ಷಣದ ಹಂತವು ವಿದ್ಯಾರ್ಥಿಯ ಜೀವನದ ಅತ್ಯಂತ ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗಿರದೆ, ವ್ಯಕ್ತಿತ್ವ ವಿಕಸನ ಮತ್ತು ಭವಿಷ್ಯದ ವೃತ್ತಿಜೀವನಕ್ಕೆ ಅಡಿಪಾಯ ಹಾಕುವ ಕಾಲ. ಈ ಹಂತದಲ್ಲಿ ಸರಿಯಾದ ಶಿಕ್ಷಣ, ಶಿಸ್ತು ಮತ್ತು ಸಂಯಮಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಗುಣಮಟ್ಟದ ಶಿಕ್ಷಣವು ವಿದ್ಯಾರ್ಥಿಯಲ್ಲಿ ವಿಷಯದ ಜ್ಞಾನದೊಂದಿಗೆ ವಿಮರ್ಶಾತ್ಮಕ ಚಿಂತನೆ, ಕೌಶಲಗಳು ಮತ್ತು ಸಾಂಸ್ಕೃತಿಕ ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಆದರೆ, ಈ ಶಿಕ್ಷಣಕ್ಕೆ ಅರ್ಥಪೂರ್ಣ ಶಕ್ತಿ ನೀಡಲು ಶಿಸ್ತು ಅತಿ ಮುಖ್ಯ. ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವುದು, ಪಠ್ಯ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುವುದು ಮತ್ತು ಕಾಲೇಜಿನ ನಿಯಮಗಳನ್ನು ಪಾಲಿಸುವುದು ವಿದ್ಯಾರ್ಥಿಯಲ್ಲಿ ಕರ್ತವ್ಯ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದು ಹೇಳಿದರು‌.

ಮುಂದುವರಿದು ಮಾತನಾಡಿದ ಅವರು, ಶಿಕ್ಷಣ ಹಾಗೂ ಶಿಸ್ತಿನ ಜೊತೆಗೆ ಸಂಯಮ ಅಥವಾ ತಾಳ್ಮೆಯು ಜೀವನದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗಿದೆ. ಪರೀಕ್ಷಾ ಒತ್ತಡಗಳು, ಸೋಲುಗಳು ಮತ್ತು ವೈಯಕ್ತಿಕ ಸಮಸ್ಯೆಗಳು ಎದುರಾದಾಗ ಧೃತಿಗೆಡದೆ, ವಿವೇಚನೆಯಿಂದ ನಿರ್ಧಾರ ಕೈಗೊಳ್ಳಲು ಸಂಯಮ ನೆರವಾಗುತ್ತದೆ. ​ಅಂತಿಮವಾಗಿ, ಶಿಕ್ಷಣ, ಶಿಸ್ತು ಮತ್ತು ಸಂಯಮಗಳ ಸಮ್ಮಿಲನವೇ ಒಬ್ಬ ವಿದ್ಯಾರ್ಥಿಯನ್ನು ಜವಾಬ್ದಾರಿಯುತ, ಮೌಲ್ಯಾಧಾರಿತ ಹಾಗೂ ಯಶಸ್ವಿ ನಾಗರಿಕನನ್ನಾಗಿ ರೂಪಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಕುರಿತು ಪರಿಚಯ ಭಾಷಣ ಮಾಡಿದ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಸಂಯೋಜಕರು ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥರೂ ಆದ ರಕ್ಷಿತ್.ಎ ಅವರು, ಈ ಕಾರ್ಯಕ್ರಮ ಏರ್ಪಡಿಸಲು ಮುಖ್ಯ ಕಾರಣವೇನೆಂದರೆ ವಿದ್ಯಾರ್ಥಿಗಳಿಗೆ ಪಿಯುಸಿ ಹಂತದಿಂದ ಪದವಿ ಶಿಕ್ಷಣದ ಹೊಸ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳಲು ನೆರವಾಗುವುದಾಗಿದೆ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಕಾಲೇಜಿನ ಪಠ್ಯಕ್ರಮ, ಪರೀಕ್ಷಾ ನಿಯಮಗಳು, ಉಪನ್ಯಾಸಕರು ಮತ್ತು ಗ್ರಂಥಾಲಯದಂತಹ ಮೂಲಸೌಕರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ಜೊತೆಗೆ, ಹೊಸ ಸಹಪಾಠಿಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳಲು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಹಾಗೂ ಕಾಲೇಜಿನ ಶಿಸ್ತು, ರ‍್ಯಾಗಿಂಗ್ ವಿರೋಧಿ ನಿಯಮಗಳು ಮತ್ತು ಲಭ್ಯವಿರುವ ಮಾರ್ಗದರ್ಶನ ವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳಲು ಇದು ಅತ್ಯಂತ ಸಹಕಾರಿಯಾಗಿದೆ ಎಂದು ಮಾಹಿತಿ ನೀಡಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸರ್ವಮಂಗಳಮ್ಮ.ಟಿ.ಆರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸಂಗಮೇಶ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಫೀಸಾ ಬಾನು, ತಾಲೂಕ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕಂಚಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಅಧ್ಯಾಪಕರಾದ ಚನ್ನಪ್ಪ ಸಂಗಮೇಶ್ವರ ಸ್ವಾಗತಿಸಿದರು, ಶಿವರಂಜನಿ ನಿರೂಪಿಸಿದರು ಮತ್ತು ವಿದ್ಯಾರ್ಥಿನಿ ಮೀನಾಕ್ಷಿ ಪ್ರಾರ್ಥಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳಾದ‌ ವೆಂಕೋಬಾ, ಭಾಗ್ಯಮ್ಮ ಮತ್ತು ಲಕ್ಷ್ಮೀ ಕಾಲೇಜಿಗೆ ಸಂಬಂಧಿಸಿದಂತೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ವಿಭಾಗದ ಅಧ್ಯಾಪಕರುಗಳಾದ ಶಂಬುಲಿಂಗಯ್ಯ ಸ್ವಾಮಿ, ವೀರಭದ್ರಪ್ಪ, ಸಾಯಿ ಕುಮಾರ್, ವಿಜಯ್ ಸರೋದೆ, ಶಾಂತವ್ವ, ಸೈಯದ್ ಇದಾಯತುಲ್ಲಾ, ಆನಂದ್ ಕಂಚಿ, ಅಂದಿಗೇಲಪ್ಪ, ಕೇಶವಮೂರ್ತಿ ಸೇರಿದಂತೆ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು‌.

Leave a Reply

Your email address will not be published. Required fields are marked *