*
*ಕನಕಗಿರಿ :ಸೆ ,13* ಹುಲಿಹೈದರ್ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ವತಿಯಿಂದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ್ ಎಸ್ ತಂಗಡಗಿ ಅವರಿಗೆ ಕನಕಾಪುರ ಗ್ರಾಮದ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಮನವಿ ಸಲ್ಲಿಸಲಾಯಿತು.
ಕೃಷ್ಣಾ ಬಿ ಸ್ಕೀಮ್‌ನಿಂದ ಬರಬೇಕಾದ ನೀರು ಇದುವರೆಗೂ ಗ್ರಾಮದ ಯಾವ ಕೆರೆಗೂ ಬಂದಿಲ್ಲದೆ ಖಾಲಿ ಉಳಿದಿವೆ. ಗೌರಿಪುರದಿಂದ ಲಾಯದುಣಸಿ ಗ್ರಾಮದ ಕೆರೆಗೆ ಬರುವ ಪೈಪ್‌ಲೈನ್ ಹಾನಿಗೊಂಡಿದ್ದು, ನೀರು ಪೋಲಾಗುತ್ತಿರುವುದರಿಂದ ಕೂಡಲೇ ಪೈಪ್‌ಲೈನ್ ಸರಿಪಡಿಸಬೇಕು.
ಕನಕಾಪುರ ಗ್ರಾಮದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ಎಲ್ಲೆಂದರಲ್ಲಿ ಹರಿದು ಜನರಿಗೆ ಓಡದಾಡಲು ತೊಂದರೆಯಾಗುತ್ತಿದ್ದು, ತುರ್ತಾಗಿ ಚರಂಡಿ ಹಾಗೂ ರಸ್ತೆಗಳನ್ನು ನಿರ್ಮಿಸಬೇಕು.
ಗ್ರಾಮದ 80 ರಿಂದ 100 ಹೊಸ ಮನೆಗಳು, ಬನ್ನಿ ಗಿಡದ ಕ್ಯಾಂಪ್ ಹಾಗೂ ಎಸ್‌ಸಿ ಕಾಲೋನಿಯಲ್ಲಿ ಹೊಸ ಕಂಬಗಳನ್ನು ಹಾಕಿ ಕರೆಂಟ್ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ಮನೆಗಳ ಮೇಲೆ ಹಾದು ಹೋಗಿರುವ ಹಳೆಯ ಮೇನ್ ವಿದ್ಯುತ್ ಲೈನ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು.
ರೈತರ ಹೊಲಗಳಿಗೆ ಹೋಗುವ ರಸ್ತೆಗಳಲ್ಲಿ ಗಿಡಮರಗಳು ಹಾಗೂ ಮುಳ್ಳುಗಳು ಬೆಳೆದಿರುವುದರಿಂದ ದನಕರುಗಳು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದ್ದು, ರಸ್ತೆಗಳನ್ನು ಸ್ವಚ್ಛಗೊಳಿಸಿ ಉತ್ತಮ ದಾರಿ ಮಾಡಿಕೊಡಬೇಕು.
ಶೌಚಾಲಯಗಳ ನಿರ್ಮಾಣ, ಹೆಚ್ಚುವರಿ ತರಗತಿಗೆ ಕೊಠಡಿ ಹಾಗೂ 2027-28ನೇ ಸಾಲಿನಲ್ಲಿ 9ನೇ ತರಗತಿ ಆರಂಭಿಸುವುದಕ್ಕಾಗಿ ಎರಡು ಕೊಠಡಿಗಳನ್ನು ದುರಸ್ಥಿಪಡಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ (ರಿ) ಗ್ರಾಮ ಘಟಕ ಕನಕಾಪುರದ ಅಧ್ಯಕ್ಷರಾದ ಮರಿಯಪ್ಪ ಹುಗ್ಗಿ ಹಾಗೂ ಶೇಖರಪ್ಪ, ರಮೇಶ, ಮರಿಯಪ್ಪ ದಂಡಿನ, ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
