.*
*ಕನಕಗಿರಿ,ಸೆ.9-*
ತಾಲೂಕಿನ ಎಪಿಎಂಸಿ ಮಾರುಕಟ್ಟೆಯಲ್ಲಿ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ, ಮಾರುಕಟ್ಟೆಯ ಗಡಿ ಹಾಗೂ ತಡೆಗೋಡೆ ವಿಚಾರವಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಎಪಿಎಂಸಿ ಮಾರುಕಟ್ಟೆ ಆವರಣದ ತಡೆಗೋಡೆಯನ್ನು ತೆರವುಗೊಳಿಸಬೇಕು. ಇಲ್ಲವಾದರೆ ಸಂಪೂರ್ಣ ಎಪಿಎಂಸಿ ಮಾರುಕಟ್ಟೆಯ ಹದ್ದುಬಸ್ತು ಗುರುತಿಸಿ ಶಾಶ್ವತ ತಡೆಗೋಡೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಎಪಿಎಂಸಿ ಕಾರ್ಯದರ್ಶಿ ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದರು.
ಈಗಾಗಲೇ ಕೆಲವು ದಲ್ಲಾಳಿಗಳಿಗೆ ವಾಣಿಜ್ಯ ಮಳಿಗೆಗಳನ್ನು ನೀಡಲಾಗಿದ್ದು, ಮಾರುಕಟ್ಟೆಯ ಗಡಿ ಹಾಗೂ ತಡೆಗೋಡೆಯ ಹದ್ದುಬಸ್ತನ್ನು ಮೀರಿ ಕೆಲವು ಕಾಮಗಾರಿಗಳು ನಡೆದಿವೆ ಎಂದು ಸಾರ್ವಜನಿಕರು ಆರೋಪಿಸಿದರು. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವಿಚಾರವಾಗಿ ಸಾರ್ವಜನಿಕರು ಹಾಗೂ ಎಪಿಎಂಸಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸಾರ್ವಜನಿಕರು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಗೋಡೆ ನಿರ್ಮಾಣ ಮಾಡಬೇಕೋ ಅಥವಾ ತೆರವುಗೊಳಿಸಬೇಕೋ ಎಂಬ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆದರೆ ಅಧಿಕಾರಿಗಳ ಭರವಸೆಯಿಂದ ಸಮಾಧಾನಗೊಳ್ಳದ ಸಾರ್ವಜನಿಕರು, ಸಮಸ್ಯೆ ಹಲವು ದಿನಗಳಿಂದ ಗೊಂದಲಕ್ಕೆ ಕಾರಣವಾಗಿದ್ದು, ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸ್ಪಷ್ಟವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಾರ್ವಜನಿಕರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು. ಯಾವುದೇ ವ್ಯಕ್ತಿ ಅಥವಾ ದಲ್ಲಾಳಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳದೆ, ಎಪಿಎಂಸಿ ಮಾರುಕಟ್ಟೆಯ ಸಂಪೂರ್ಣ ಗಡಿ ಗುರುತಿಸಿ ಸಾರ್ವಜನಿಕರಿಗೆ ಸ್ಪಷ್ಟತೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ತಡೆಗೋಡೆಯನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು; ಇಲ್ಲವಾದರೆ ಮಾರುಕಟ್ಟೆಯ ಸಂಪೂರ್ಣ ಹದ್ದುಬಸ್ತು ಗುರುತಿಸಿ ಶಾಶ್ವತ ತಡೆಗೋಡೆ ನಿರ್ಮಿಸಬೇಕು. ಈ ಕುರಿತು ಅಧಿಕಾರಿಗಳು ವಿಳಂಬ ಮಾಡದೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
“””ಈಗಾಗಲೇ ಹಲವಾರು ಬಾರಿ ನಮ್ಮ ಸಂಘಟನೆ ವತಿಯಿಂದ ಮನವಿ ಮಾಡಿದ್ದರು ಮತ್ತು ಅನೇಕ ಬಾರಿ ಎಪಿಎಂಸಿ ತಡೆಗೋಡೆಯ ಸಂಬಂಧ ಪಟ್ಟ ಹಾಗೆ ಪತ್ರಿಕೆಯಲ್ಲಿ ವರದಿಯಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ””
*– ಗಣೇಶ್ ರೆಡ್ಡಿ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ.*
“””ಈಗಾಗಲೇ ಮೇಲಧಿಕಾರಿಗಳಿಗೆ ಪತ್ರ ಬರೆದಿರುತ್ತೇವೆ ಅವರ ಆದೇಶ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು”””
*– ಸಾವಿತ್ರಿ ಎಸ್ ಪಾಟೀಲ್ ಎಪಿಎಂಸಿ ಸೆಕ್ರೆಟರಿ ಕನಕಗಿರಿ.*
