October 7, 2026
IMG-20260909-WA0000

ವರದಿ: ಚನ್ನಬಸಪ್ಪ ‌

ಹಟ್ಟಿ ಚಿನ್ನದ ಗಣಿ: ಸೆ 9
ಜಾತ್ರೆಯ ಸಂಭ್ರಮದ ನಡುವೆಯೇ ಭಕ್ತರ ಆರೋಗ್ಯದ ಕಾಳಜಿಗೂ ಆದ್ಯತೆ ನೀಡುವ ಮೂಲಕ ಸಮೀಪದ ಯಲಗಟ್ಟಾ ಗ್ರಾಮ ಗಮನ ಸೆಳೆದಿದೆ. ಶ್ರೀ ಗಡಿಕೇಶ್ವರ ರಾಜಯೋಗಿ ಜಾತ್ರಾ ಮಹೋತ್ಸವದ ಅಂಗವಾಗಿ ಯಲಗಟ್ಟಾ ಆಯುಷ್ಮಾನ್ ಆರೋಗ್ಯ ಮಂದಿರದ ವತಿಯಿಂದ ಐದು ದಿನಗಳ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಜಾತ್ರೆಗೆ ಆಗಮಿಸಿದ ಭಕ್ತರು ಹಾಗೂ ಗ್ರಾಮಸ್ಥರಿಗೆ ಸ್ಥಳದಲ್ಲೇ ಆರೋಗ್ಯ ಸೇವೆ ಲಭ್ಯವಾಗುವಂತೆ ದೇವಸ್ಥಾನದ ಸಮೀಪದ ಕಾಂಪ್ಲೆಕ್ಸ್‌ನಲ್ಲಿ ಶಿಬಿರ ಆಯೋಜಿಸಲಾಗಿತ್ತು. ಜಾತ್ರೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಸೇವೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಬಿಪಿ, ಶುಗರ್, ಜ್ವರ, ಚರ್ಮರೋಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಲಾಯಿತು. ವೈದ್ಯರಾದ ಡಾ. ಸರಸ್ವತಿ ಹಾಗೂ ಡಾ. ವಿಜಯಕುಮಾರ್ ಅವರು ನೂರಾರು ಸಾರ್ವಜನಿಕರನ್ನು ತಪಾಸಣೆ ನಡೆಸಿ, ಆರೋಗ್ಯದ ಕುರಿತು ಅಗತ್ಯ ಸಲಹೆ ನೀಡಿದರು. ಅಗತ್ಯವಿರುವವರಿಗೆ ಉಚಿತ ಔಷಧಗಳನ್ನು ವಿತರಿಸಲಾಯಿತು.
ಜಾತ್ರೆಯ ಜತೆಗೆ ಆರೋಗ್ಯ ಕಾಳಜಿ
ಧಾರ್ಮಿಕ ಕಾರ್ಯಕ್ರಮದ ನಡುವೆ ಆರೋಗ್ಯ ಸೇವೆ ಒದಗಿಸುವ ಪ್ರಯತ್ನಕ್ಕೆ ಭಕ್ತರು ಹಾಗೂ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ದೇವರ ದರ್ಶನಕ್ಕಾಗಿ ಆಗಮಿಸಿದವರು ಆರೋಗ್ಯ ತಪಾಸಣೆಯನ್ನೂ ಮಾಡಿಸಿಕೊಂಡು ಶಿಬಿರದ ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ವೈದ್ಯರು ಮಾತನಾಡಿ, “ಜಾತ್ರೆ, ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರುತ್ತಾರೆ. ಇಂತಹ ಸಂದರ್ಭಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜತೆಗೆ ಸರ್ಕಾರದ ಉಚಿತ ಆರೋಗ್ಯ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.
ಶಿಬಿರದ ಯಶಸ್ಸಿಗೆ ಯಲಗಟ್ಟಾ ಆಯುಷ್ಮಾನ್ ಆರೋಗ್ಯ ಮಂದಿರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಮುಖಂಡರು ಸಹಕಾರ ನೀಡಿದರು.
ಗ್ರಾಮಸ್ಥರಾದ ರಾಜು ನಾಯಕ್, ಅಣ್ಣಯ್ಯ, ಬಸವರಾಜ, ಭೀಮಣ್ಣ, ಅಮರೇಶ್, ಸಿದ್ದಪ್ಪ ಗಾಣದಾಳ್ ಸೇರಿದಂತೆ ಊರಿನ ಯುವಕರು, ಮಹಿಳೆಯರು, ಸಂತರು, ಶರಣರು, ಮುಖಂಡರು ಹಾಗೂ ಜಾತ್ರೆಗೆ ಆಗಮಿಸಿದ್ದ ಭಕ್ತರು ಆರೋಗ್ಯ ಇಲಾಖೆ, ವೈದ್ಯರು ಮತ್ತು ಸಿಬ್ಬಂದಿಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *