October 7, 2026
IMG-20260928-WA0031

ಕನಕಗಿರಿ,ಸೆ,28-
ಜಾಂಬವ ಯುವ ಸೇನೆ ಸಂಘಟನೆಯಲ್ಲಿ ಕೊಪ್ಪಳ ಜಿಲ್ಲೆಗೆ ಹೊಸ ಸಾರಥಿ ನೇಮಕವಾಗಿದ್ದು, ಕನಕಗಿರಿಯ ಲಿಂಗಪ್ಪ ಪೂಜಾರಿ ಅವರನ್ನು ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಎಸ್.ಎಂ. ರಮೇಶ್ ಚಕ್ರವರ್ತಿಯವರು ನೇಮಕಾತಿ ಆದೇಶ ಪತ್ರ ನೀಡಿ ಜವಾಬ್ದಾರಿ ವಹಿಸಿದ್ದಾರೆ.
ಜಿಲ್ಲೆಯಲ್ಲಿ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ನೂತನ ಜಿಲ್ಲಾಧ್ಯಕ್ಷರು ಕಾರ್ಯೋನ್ಮುಖರಾಗಬೇಕು. ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಸಂಘಟನೆಯ ಘಟಕಗಳನ್ನು ರಚಿಸಿ, ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯೊಂದಿಗೆ ಬೆಸೆಯುವಂತೆ ರಾಜ್ಯಾಧ್ಯಕ್ಷರು ಸೂಚಿಸಿದರು.
ಸಮಾಜದ ಬಡವರು, ದಲಿತರು ಹಾಗೂ ಮಹಿಳೆಯರು ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಅವರ ಪರವಾಗಿ ಸಂಘಟನೆ ನಿಲ್ಲಬೇಕು. ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾನೂನುಬದ್ಧ ಹೋರಾಟ ಹಾಗೂ ಅಗತ್ಯ ಸಹಕಾರ ನೀಡಲು ಶ್ರಮಿಸಬೇಕು ಎಂದು ಡಾ. ಎಸ್.ಎಂ. ರಮೇಶ್ ಚಕ್ರವರ್ತಿ ಹೇಳಿದರು.
ಸಾಮಾಜಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ, ಹಕ್ಕುಗಳಿಗಾಗಿ ಧ್ವನಿ ಎತ್ತುವ ಕಾರ್ಯವನ್ನು ಸಂಘಟನೆ ಮುಂದುವರಿಸಬೇಕು. ಸಂಘಟನೆಯ ಆಶಯಗಳನ್ನು ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ತಲುಪಿಸುವ ಜವಾಬ್ದಾರಿ ನೂತನ ಜಿಲ್ಲಾಧ್ಯಕ್ಷರ ಮೇಲಿದೆ ಎಂದು ತಿಳಿಸಿದರು.
ನೂತನ ಜಿಲ್ಲಾಧ್ಯಕ್ಷ ಲಿಂಗಪ್ಪ ಪೂಜಾರಿ ಅವರು ಮಾತನಾಡಿ, ರಾಜ್ಯಾಧ್ಯಕ್ಷರು ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿದರು. ಕೊಪ್ಪಳ ಜಿಲ್ಲೆಯಲ್ಲಿ ಜಾಂಬವ ಯುವ ಸೇನೆಯನ್ನು ಬಲಿಷ್ಠವಾಗಿ ಕಟ್ಟಲು ಹಾಗೂ ಯುವಕರನ್ನು ಸಂಘಟಿಸಲು ಆದ್ಯತೆ ನೀಡುವುದಾಗಿ ಹೇಳಿದರು.
ಬಡವರು, ದಲಿತರು ಹಾಗೂ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಲು ಸಂಘಟನೆಯ ಮೂಲಕ ಧ್ವನಿ ಎತ್ತುವುದಾಗಿ ಲಿಂಗಪ್ಪ ಪೂಜಾರಿ ತಿಳಿಸಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ನೇಮಿಸಿ, ಗ್ರಾಮಮಟ್ಟದಿಂದ ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಜಾಂಬವ ಯುವ ಸೇನೆಯ ಸಾಮಾಜಿಕ ಚಟುವಟಿಕೆಗಳಿಗೆ ಮತ್ತಷ್ಟು ವೇಗ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.
ಲಿಂಗಪ್ಪ ಪೂಜಾರಿ ಅವರ ನೇಮಕಕ್ಕೆ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ, ನೂತನ ಜಿಲ್ಲಾಧ್ಯಕ್ಷರಿಗೆ ಶುಭಾಶಯ ಕೋರಿದ್ದಾರೆ.

Leave a Reply

Your email address will not be published. Required fields are marked *