Oplus_16908288
ಕನಕಗಿರಿ,ಸೆ.25-
ತಾಲೂಕಿನ ಹುಲಿಹೈದರ್ ಹಾಗೂ ಸುಳೇಕಲ್ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಇಂದು ಜಿಲ್ಲಾಧಿಕಾರಿಗಳಾದ ಸುರೇಶ್ ಬಿ ಹಿಟ್ನಾಳ್ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಭೇಟಿ ನೀಡಿ ಬರ ಪರಿಶೀಲನೆ ನಡೆಸಿದರು.
ಈ ವೇಳೆ ರೈತರ ಜಮೀನುಗಳಿಗೆ ಭೇಟಿ ನೀಡಿದ ಅವರು, ರೈತರೊಂದಿಗೆ ಚರ್ಚಿಸಿ, ಬರ ಪರಿಸ್ಥಿತಿಯಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಕೃಷಿಹೊಂಡ ಕಾಮಗಾರಿ ಹಾಗೂ ಕಲಿಕೇರಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆದರು. ಈ ವೇಳೆ ವಿಬಿಜಿರಾಮ್ ಜೀ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರಿಂದಲೂ ಮಾಹಿತಿಯನ್ನು ಪಡೆದರು.
ಜೊತೆಗೆ ಗ್ರಾಮಗಳಲ್ಲಿನ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ನೀರಿನ ಲಭ್ಯತೆ, ಕೃಷಿ ಪರಿಸ್ಥಿತಿ ಹಾಗೂ ಉದ್ಯೋಗದ ಅಗತ್ಯತೆ ಸೇರಿದಂತೆ ಬರ ಪರಿಸ್ಥಿತಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ, ತಹಶೀಲ್ದಾರ್ ಚಂದ್ರಶೇಖರ್ ಗಾಳಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ರಾಜಶೇಖರ್, ಸಹಾಯಕ ನಿರ್ದೇಶಕರಾದ ನಾಗೇಶ್ ಎಚ್. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
