ಗಂಗಾವತಿ :ಸೆ 11 ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾಯಿತ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ವಿರುದ್ಧ ಸಲ್ಲಿಸಿರುವ ಉದ್ದೇಶ ಪೂರ್ವಕ ದೂರನ್ನು ಪರಿಗಣಿಸದಂತೆ ಹಾಗೂ ಸುಳ್ಳು ಆರೋಪಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಲು ಒತ್ತಾಯಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ನಗರದ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಅವರ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಮುಕ್ಕುಂದಿ ಮಾತನಾಡಿ, ಡಿ.ವಿ. ಗುಂಡಪ್ಪ ಅವರು ಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸುಮಾರು 95 ವರ್ಷಗಳ ಸುದೀರ್ಘ ಇತಿಹಾಸವಿದೆ. ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕುಗಳಲ್ಲಿ ಸಂಘದ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಸಕ್ರಿಯ ಪತ್ರಕರ್ತರು ಸಂಘದ ಸದಸ್ಯರಾಗಿದ್ದಾರೆ. ಪತ್ರಕರ್ತರ ಹಕ್ಕುಗಳು, ವೃತ್ತಿಪರ ಸಮಸ್ಯೆಗಳು ಹಾಗೂ ಅವರ ಕ್ಷೇಮಾಭಿವೃದ್ಧಿಗಾಗಿ ಸಂಘವು ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ.
ಸಂಘದ ನಿಯಮಾನುಸಾರ ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿರುವ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಸಂಘದ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಇತ್ತೀಚೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯ ಕೆಲವು ವ್ಯಕ್ತಿಗಳು ಶಿವಾನಂದ ತಗಡೂರು ಅವರ ವಿರುದ್ಧ ವಿವಿಧ ರೀತಿಯ ದೂರುಗಳನ್ನು ಸಲ್ಲಿಸಿರುವುದು ನಮ್ಮ ಗಮನಕ್ಕೆ ಬಂದಿದೆ.
ಈ ರೀತಿಯ ದೂರುಗಳು ಸಂಘದ ಚುನಾಯಿತ ನಾಯಕತ್ವದ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಸಲ್ಲಿಸಲಾಗುತ್ತಿವೆ ಎಂಬ ಅನುಮಾನ ನಮ್ಮಲ್ಲಿದೆ. ಆದ್ದರಿಂದ ಯಾವುದೇ ದೂರು ಅಥವಾ ಆರೋಪವನ್ನು ಪರಿಶೀಲಿಸದೆ ಏಕಪಕ್ಷೀಯವಾಗಿ ಪರಿಗಣಿಸಬಾರದು ಹಾಗೂ ಸಂಬಂಧಿಸಿದ ಎಲ್ಲ ದಾಖಲೆಗಳು ಮತ್ತು ವಾಸ್ತವಾಂಶಗಳನ್ನು ಪರಿಶೀಲಿಸಿದ ನಂತರವೇ ಕ್ರಮ ಕೈಗೊಳ್ಳಲು ಮುಂದಾಗಬೇಕು. ಹಾಗೆಯೇ ಯಾವುದೇ ವ್ಯಕ್ತಿ ಅಥವಾ ಸಂಘಟನೆಯು ಉದ್ದೇಶ ಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿ, ವ್ಯಕ್ತಿಯ ಅಥವಾ ಸಂಘಟನೆಯ ಪ್ರತಿಷ್ಠೆಗೆ ದಕ್ಕೆ ತರುವ ಪ್ರಯತ್ನ ಮಾಡಿರುವುದು ಖಂಡನೀಯವಾಗಿದೆ ಎಂದು ಹೇಳಿದರು. ನಂತರ ಗ್ರೇಡ್ 2 ತಹಸೀಲ್ದಾರ ವೆಂಟಕೇಶ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ದೇಸಾಯಿ, ಗೌರವ ಅಧ್ಯಕ್ಷರಾದ ನಾಗರಾಜ ಇಂಗಳಗಿ, ತಾಲೂಕು ಉಪಾಧ್ಯಕ್ಷರಾದ ಹರೀಶ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ನಾಯಕ, ಸಹ ಕಾರ್ಯದರ್ಶಿ ವಿಜಯಕುಮಾರ ಸಣಾಪೂರ, ಖಜಾಂಚಿ ಬಿ.ದೇವರಾಜ ಹಿರಿಯ ಪತ್ರಕರ್ತರಾದ ವಿ.ಎಸ್.ಪಾಟೀಲ್, ಕೃಷ್ಣ ವೀರಾಪೂರ, ಕೆ.ನಿಂಗಜ್ಜ, ಸುದರ್ಶನ ವೈದ್ಯ, ವೆಂಕಟೇಶ ಮಾಂತಾ ಸಂಘಟನೆಯ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ವಸಂತ ಕುಮಾರ, ಶರಣಯ್ಯಸ್ವಾಮಿ ಸಂಘಟನೆಯ ಪದಾಧಿಕಾರಿಗಳಾದ ಶರಣಪ್ಪ ಉಪ್ಪಾರ, ರಮೇಶ ಜೋಗಿನ್, ಮಂಜುನಾಥ ಗುಡ್ಲಾನೂರ, ದಿವಾಕರ್, ರಗಡಪ್ಪ, ಟಾಕಪ್ಪ, ಮಹೇಶ್‌ಕುಮಾರ, ಹೇಮಂತಕುಮಾರ, ದೇವರಾಜ ಹಾಗೂ ಇತರಿದ್ದರು.
